

ಬೇಲೂರು: ಮನುಷ್ಯನ ಮನಸ್ಸು, ದೇಹ ಹಾಗೂ ಆರೋಗ್ಯ ಕಾಪಾಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಯೋಗಭ್ಯಾಸಕ್ಕೆ ಸಮಯ ಮೀಸಲಿಡಬೇಕು. ಸಾವಿರಾರು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಹುಟ್ಟಿದ ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ತಾಲೂಕು ಆಡಳಿತ, ಪುರಸಭೆ, ದೇಗುಲ ಆಡಳಿತ, ನಮನ್ ನಿಮಾನ್ಸ್ ಬೆಂಗಳೂರು ಹಾಗೂ ಪತಂಜಲಿ ಮತ್ತು ರಾಘವೇಂದ್ರ ಯೋಗ ಕೇಂದ್ರ, ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಶ್ರೀ ಚನ್ನಕೇವಸ್ವಾಮಿ ದೇಗುಲದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂಬತ್ತು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು. ವಿಶ್ವದ ನಾನಾ ಭಾಗಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲರೂ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಯೋಗದ ಬಗ್ಗೆ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಮಾತನಾಡಿ, ಮನಸ್ಸು ಮತ್ತು ದೇಹಕ್ಕೆ ಚೈತನ್ಯ ಕೊಡುವ ಸಾಮರ್ಥ್ಯ ಏನಾದರೂ ಇದೆ ಎಂದರೆ ಅದು ಯೋಗಕ್ಕೆ ಮಾತ್ರ. ಮನುಷ್ಯ ಸದಾ ಕಾಲ ಒತ್ತಡದಲ್ಲಿರುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜತೆಗೆ ಆಯುಷ್ಯ ಕುಗ್ಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿನಿತ್ಯ ಯೋಗ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಯೋಗ ಮನುಷ್ಯನ ದೈಹಿಕ, ಮಾನಸಿಕ ಹಾಗೂ ಪ್ರಾಕೃತಿಕ ಬೆಳವಣಿಗೆಗೆ ಕಾರಣವಾಗಿದೆ. ಪ್ರಸ್ತುತ ಮಹಿಳೆಯರು, ಮಕ್ಕಳಿಗೆ ಯೋಗ ಕಲಿಸುವುದು ಅಗತ್ಯವಾಗಿದೆ. ಇದು ನಮ್ಮ ದೇಶದ ಆಸ್ತಿ. ಇದನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ತಾಪಂ ಇಒ ಸತೀಶ್, ಪುರಸಭೆ ಮುಖ್ಯಧಿಕಾರಿ ಸುಜಯ್, ಬಿಇಒ ಕೆ.ಪಿ.ನಾರಾಯಣ್, ನಮನ್ ನಿಮ್ಹಾನ್ಸ್‌ನ ನವೀನ್, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಇಒ ಯೋಗೀಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಯೋಗ ದಿನಾಚರಣೆ ಅಂಗವಾಗಿ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲ ಒಳ ಆವರಣದಲ್ಲಿ ಆಯೋಜಿಸಿದ್ದ ಯೋಗ ದಿನ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಸುರೇಶ್, ಸುಜಯ್, ಎಂ.ಮಮತಾ, ಎಂ.ಎಸ್.ಶಶಿಕಲಾ, ನವೀನ್, ಪುಟ್ಟಸ್ವಾಮಿಗೌಡ ಇತರರು ಭಾಗವಹಿಸಿದ್ದರು.