ವಿದ್ಯಾರ್ಥಿಗಳು ಶೈಕ್ಷಣಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಿ

23byd-1
Published on

ಬ್ಯಾಡಗಿ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಭವಿಷ್ಯವನ್ನು ಉಜ್ವಲಗೊಳಿಸಿ, ಸುಸಂಸ್ಕೃತ ನಾಗರಿಕ ಸಮಾಜ ನಿರ್ವಿುಸಬೇಕು ಎಂದು ಸಾಹಿತಿ ಸಂಕಮ್ಮ ಸಂಕಣ್ಣನವರ ತಿಳಿಸಿದರು.

ಪಟ್ಟಣದ ಎಸ್​ಎಸ್​ಪಿಎನ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಂಸತ್ತು ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ- ಕಾಲೇಜು ಹಂತದಲ್ಲಿ ಎಲ್ಲ ಮಕ್ಕಳಿಗೆ ಸಂವಿಧಾನ, ಚುನಾವಣೆ, ರಾಜಕೀಯ ಜ್ಞಾನ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಸಂಸತ್ತು ರಚಿಸುವ ಮೂಲಕ ಜನಪ್ರತಿನಿಧಿಗಳು ಹೇಗೆ ಆಯ್ಕೆಯಾಗಲಿದ್ದಾರೆ. ಜವಾಬ್ದಾರಿ, ಕರ್ತವ್ಯ ಇತ್ಯಾದಿಗಳ ಮಾಹಿತಿ ಅಗತ್ಯವಿದೆ ಎಂದರು.

ಅಧ್ಯಯನದ ಜತೆ ವಿದ್ಯಾರ್ಥಿಗಳು ಕಥೆ, ಕವನ, ಕಾದಂಬರಿ, ಸಾಹಿತ್ಯ ರಚನೆಗೆ ಒತ್ತು ನೀಡಿದಾಗ ಸಮಾಜದಲ್ಲಿ ಬಹುಮುಖಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಎಲ್ಲರಲ್ಲಿಯೂ ಪ್ರತಿಭೆ ಇದ್ದು, ಸಕಾಲಕ್ಕೆ ಸೂಕ್ತ ಮಾರ್ಗದರ್ಶನ ಕೊರತೆಯಿಂದ ಹಿನ್ನೆಡೆಯಾಗಬಹುದು. ಆದರೆ, ಅವಕಾಶಗಳನ್ನು ನಾವೇ ಹುಡುಕಿಕೊಂಡು ಭವಿಷ್ಯದಲ್ಲಿ ಗುರಿ ಸಾಧಿಸಬೇಕು ಎಂದರು.

ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಚಂದ್ರಪ್ಪ ಶೆಟ್ಟರ, ಮುಖ್ಯ ಶಿಕ್ಷಕ ಸುಭಾಸ ಎಲಿ, ಶಿಕ್ಷಕರಾದ ಪಿ.ಎಫ್. ಕರಿಯಣ್ಣವರ, ಪೂರ್ಣಿಮಾ ಎಸ್., ಅನ್ನಪೂರ್ಣಾ ಬಡಿಗೇರ, ಕಲಾವಿದ ಹರೀಶ ಮಾಳಪ್ಪನವರ, ಜಿ.ಮಂಗಳಾ, ಮಂಜುಶ್ರೀ ಹೆಬ್ಬಳ್ಳಿ, ರೈತಸಂಘದ ಅಧ್ಯಕ್ಷ ಚಂದ್ರಣ್ಣ ಛತ್ರದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net