ಎಸ್‌ಎಸ್‌ಎಲ್‌ಸಿ ಸಾಧಕರಾಗಿ ಹೊರಹೊಮ್ಮಲಿ

1
ಹುಕ್ಕೇರಿ ಪಟ್ಟಣದ ಗುರುಶಾಂತೇಶ್ವರ ಅಕ್ಷರ ದಾಸೋಹ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರೇರಣಾ ಕಾರ್ಯಕ್ರಮವನ್ನು ಅಂಕಿತಾ ಕೊಣ್ಣೂರ ಉದ್ಘಾಟಿಸಿದರು. ಬಿಇಒ ಪ್ರಭಾವತಿ ಪಾಟೀಲ, ಎ.ಎಸ್.ಪದ್ಮನ್ನವರ, ಪಿ.ಜಿ.ಕೊಣ್ಣೂರ ಇತರರಿದ್ದರು.
Published on

ಹುಕ್ಕೇರಿ: ಮಕ್ಕಳಿಂದ ಪಾಲಕರ ಹೆಸರು ಗುರುತಿಸುವಂತಾಗಬೇಕು. ಅಂತಹ ಸಾಧನೆಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಬಿಇಒ ಪ್ರಭಾವತಿ ಪಾಟೀಲ ಹೇಳಿದರು.

ಪಟ್ಟಣದ ಗುರುಶಾಂತೇಶ್ವರ ಅಕ್ಷರ ದಾಸೋಹ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ಪ್ರೇರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವರ್ಷ ಹುಕ್ಕೇರಿ ತಾಲೂಕಿನ ವಿದ್ಯಾರ್ಥಿಗಳು ಸಾಧನೆ ಮಾಡಲೆಂದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಕೊಣ್ಣೂರ ವಿದ್ಯಾರ್ಥಿಯನ್ನು ಕರೆಯಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ವರ್ಷವಿಡಿ ಇಂತಹ ಕಾರ್ಯಕ್ರಮಗಳನ್ನು ಶಿಕ್ಷಕರ ಸಹಕಾರದಿಂದ ಆಯೋಜಿಸುವುದಾಗಿ ತಿಳಿಸಿದರು. ನಿವೃತ್ತ ಉಪನ್ಯಾಸಕ ಪಿ.ಜಿ.ಕೊಣ್ಣೂರ ಮಾತನಾಡಿ, ಬಡತನದ ಭವಣೆಯಲ್ಲಿ ಬೆಳೆದ ಅಂಕಿತಾಳ ತಂದೆ ಅನಕ್ಷರಸ್ಥ, ತಾಯಿ ಓದು ಬರಹ ಬಲ್ಲವಳು. ಇಂತಹ ಪಾಲಕರ ಮಗಳಾಗಿ ಯಶಸ್ಸಿನ ಸಾಧನೆ ಮಾಡುವ ಮೂಲಕ ತಂದೆ, ತಾಯಿಯ ಹೆಸರು ಮತ್ತು ಗೌರವ ಹೆಚ್ಚಿಸಿದಳು. ಈ ಸಾಧನೆ ಎಲ್ಲ ಮಕ್ಕಳಿಗೂ ಪ್ರೇರಣೆಯಾಗಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಅಂಕಿತಾ ಕೊಣ್ಣೂರ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಎದುರಿಸಲು ಯಾವ ರೀತಿ ತಯಾರಿ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್.ಪದ್ಮನ್ನವರ, ಎಂ.ಎ.ಉಮರಾಣಿ, ಶ್ರೀಶೈಲ ಹಿರೇಮಠ, ಆರ್.ಆರ್.ಘಸ್ತಿ, ಆರ್.ಎಂ.ಶೆಟ್ಟಿಮನಿ ಇತರರು ಇದ್ದರು. ಶಿವಾನಂದ ಜಿನರಾಳಿ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net