

ಮುಂಡಗೋಡ: ಮಕ್ಕಳಿಗೆ ಚಿಕ್ಕಂದಿನಿಂದಲೆ ಕ್ರೀಡಾಸಕ್ತಿ ಬೆಳೆಸಿ ಸೂಕ್ತ ತರಬೇತಿ ನೀಡಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಹದಿನಾಲ್ಕು ವರ್ಷದೊಳಗಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಸೋಲು-ಗೆಲುವು ಮುಖ್ಯವಲ್ಲ. ಕ್ರೀಡೆಗಳಲ್ಲಿ ಭಾಗವಹಿಸುವುದು ಅತಿಮುಖ್ಯವಾದದು. ಮಕ್ಕಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಬೇಕು ಎಂದು ಶುಭ ಹಾರೈಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಸುಧಾ ಭೋವಿ ಮಾತನಾಡಿ, ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಕಾಣಬೇಕು. ವಿದ್ಯಾರ್ಥಿಗಳು ಹೆಚ್ಚೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ ಮಾತನನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಟೋಟಗಳಲ್ಲೂ ಸ್ಪರ್ಧಿಸಬೇಕು ಎಂದರು.
ಪಪಂ ಉಪಾಧ್ಯಕ್ಷೆ ರಹೀಮಾಬಾನು ಕುಂಕೂರ, ಡಿಡಿಪಿಐ ಬಸವರಾಜ ಪಾರಿ, ಬಿಇಒ ಜಕಣಾಚಾರಿ, ಪಪಂ ಸದಸ್ಯರಾದ ಫಣಿರಾಜ ಹದಳಗಿ, ಶ್ರೀಕಾಂತ ಸಾನು, ಶಿವರಾಜ ಸುಬ್ಬಾಯವರ, ಎಂ.ಕೆ. ರಜಾ, ನಿರ್ಮಲ ಬೆಂಡ್ಲಗಟ್ಟಿ, ಶಿಕ್ಷಕರ ಸಂಘದ ಅಧ್ಯಕ್ಷ ಪ್ರದೀಪ ಕುಲಕರ್ಣಿ, ಇತರರಿದ್ದರು.