

ವಿಜಯಪುರ: ಆರೋಗ್ಯಯುತ ಜೀವನಕ್ಕೆ ಕ್ರೀಡೆ ಅತ್ಯಗತ್ಯ. ಕ್ರೀಡೆ ಎನ್ನುವುದು ನಮ್ಮ ಪ್ರತಿನಿತ್ಯ ಜೀವನದ ಒಂದು ಭಾಗವಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಹೇಳಿದರು.
ನಗರ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯ, ದೈಹಿಕ ಶಿಕ್ಷಣ ಅಧ್ಯಯನ ವಿಭಾಗ, ದೈಹಿಕ ಶಿಕ್ಷಣ ನಿರ್ದೇಶಕರು ಸಂ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡ ಮಹಿಳಾ ಕಬಡ್ಡಿ ವೈಭವ&2024 ಅಂತಾರಾಜ್ಯ ಹೊನಲು ಬೆಳಕಿನ ಮಹಿಳಾ ಮುಕ್ತ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನತೆ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರಿಗೂ ಕ್ರೀಡಾಶಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ನೀವೆಲ್ಲರೂ ಭಾಗಿಯಾಗಿದ್ದು ಹೆಮ್ಮೆಯ ವಿಷಯ ಎಂದರು.
ವಿವಿಯ ಕುಲ ಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಕಬಡ್ಡಿ ಗ್ರಾಮೀಣ ಕ್ರೀಡೆ ಎಂದೇ ಖ್ಯಾತಿ ಪಡೆದುಕೊಂಡಿದೆ. ಈ ಪಂದ್ಯ ಮನೋಲ್ಲಾಸ ಹೆಚ್ಚಿಸುವ ಮೂಲಕ ದೈಹಿಕವಾಗಿ ನಮ್ಮನ್ನು ಸದೃಢರನ್ನಾಗಿಸುತ್ತದೆ. ಸೋಲು&ಗೆಲವು ಎಲ್ಲದರಲ್ಲೂ ಇರುತ್ತದೆ. ಭಾಗವಹಿಸುವುದು ಅತೀ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಮಾತನಾಡಿ, ಕ್ರೀಡೆಗಳು ವ್ಯಕ್ತಿಯ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳಿಸುವುದರ ಜತೆಗೆ, ಸಹಕಾರ ಮತ್ತು ಸಂಯಮದಂತಹ ಶ್ರೇಷ್ಠ ಮೌಲ್ಯ ಬೆಳೆಸುತ್ತವೆ. ಕ್ರೀಡೆಗಳಿಂದ ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಮತ್ತು ಸಹನೆ ಬೆಳೆಯುತ್ತದೆ ಎಂದರು.
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಧ್ಯಾನಚಂದ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ನಾಡಗೀತೆ ಮತ್ತು ಮಹಿಳಾ ಗೀತೆ ಹಾಡಿದರು. ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಡಾ. ಸಕ್ಪಾಲ್ ಹೂವಣ್ಣ ಸ್ವಾಗತಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಷ್ಣು ಶಿಂದೆ ನಿರೂಪಿಸಿ ವಂದಿಸಿದರು.
ಜಿಲ್ಲಾ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ರಮೇಶ ಪಾಟೀಲ, ವಿವಿಯ ದೈಹಿಕ ಶಿಕ್ಷಣ ನಿರ್ದೇಶಕರ ಸಂದ ಅಧ್ಯಕ್ಷ ಶಿವಯೋಗಿ ಎಲಿ, ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ವಿವಿಧ ರಾಜ್ಯಗಳ ಕಬಡ್ಡಿ ತಂಡ, ನಗರದ ವಿವಿಧ ಕಾಲೇಜಿನ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕರು, ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಸಂಶೋಧನಾ ವಿದ್ಯಾರ್ಥಿನಿಯರು ಮತ್ತಿತರರಿದ್ದರು.