

ಅಳವಂಡಿ: ರಡ್ಡಿ ಅಂದರೆ ನಂಬಿಕೆ, ಗೌರವ, ಧೈರ್ಯದ ಪ್ರತೀಕವಾಗಿದೆ. ಸಾಧಕರನ್ನು ಸೃಷ್ಟಿಸುವ ಶಕ್ತಿ ಮಲ್ಲಮ್ಮಳಲ್ಲಿದೆ ಎಂದು ಎರೆಹೊಸಳ್ಳಿಯ ಹೇಮ ವೇಮ ರಡ್ಡಿಪೀಠದ ವೇಮನಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಾಯಿಯ ಬೆಳ್ಳಿ ಮೂರ್ತಿಯ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ಕೊಪ್ಪಳ ತಾಲೂಕು ಮಟ್ಟದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಮಲ್ಲಮ್ಮನ ಅಧ್ಯಾತ್ಮ ಚಿಂತನೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಭಾರತೀಯ ಕುಟುಂಬ ವ್ಯವಸ್ಥೆ ಸುಂದರವಾಗಿದೆ. ಈ ವ್ಯವಸ್ಥೆ ಉತ್ತಮವಾಗಿರಲು ಮಲ್ಲಮ್ಮನ ಬದುಕಿನ ಕೌಶಲವನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದರು.
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ರಡ್ಡಿ ಸಮಾಜ ಕೊಡುಗೈ ದಾನಿಯಾಗಿದೆ. ಸಮಾಜದ ಹೆಚ್ಚು ಕುಟುಂಬಗಳು ಕೃಷಿಯನ್ನು ಅವಲಂಬಿಸಿವೆ. ಕೃಷಿಯೊಂದಿಗೆ ಇತರ ವ್ಯವಹಾರಗಳಲ್ಲಿ ಮುಂದುವರಿಯಬೇಕು. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ರಡ್ಡಿ ಸಮಾಜ ಶಿಕ್ಷಣ, ಸಂಘಟನೆ, ಕೃಷಿ, ಸಾಮಾಜಿಕ ಬದಲಾವಣೆಗೆ ಹೆಚ್ಚು ಆದ್ಯತೆ ಕೊಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಪಾಲಕರು ಕೊಡಿಸುವ ಮೂಲಕ ಅವರ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಬೇಕು ಎಂದರು.
ರಾಜ್ಯ ರಡ್ಡಿ ಸಮಾಜದ ಅಧ್ಯಕ್ಷ ಶೇಖರಗೌಡ ಪಾಟೀಲ ಮಾತನಾಡಿ, ಸಮಾಜಕ್ಕೆ ಚೈತನ್ಯ ನೀಡುವ ಕೆಲಸವನ್ನು ಸರ್ವರೂ ಮಾಡಬೇಕು, ಏನನ್ನು ಕಲಿಯದ ಹೆಣ್ಣು ಮಗಳು ಮಲ್ಲಮ್ಮ, ಆದರೆ ಎಲ್ಲರಿಗೂ ಮಾದರಿಯಾಗಿದ್ದಾಳೆ. ಶಕ್ತಿ ರೂಪಿಣಿ ಮಲ್ಕಮ್ಮನನ್ನು ಶ್ರದ್ಧೆಯಿಂದ ನೆನೆಸಬೇಕು ಎಂದರು.
ಹೂವಿನಹಡಗಲಿ ಹಿರೇಶಾಂತವೀರ ಸ್ವಾಮೀಜಿ, ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು, ನಿವೃತ್ತ ಡಿಡಿಪಿಐ ಎಮ್.ಎ.ರಡ್ಡೇರ ಮಾತನಾಡಿದರು. ನಂತರ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಅಡ್ಡಪಲ್ಲಕ್ಕಿ ಮೆರವಣಿಗೆ: ಬೆಳಗ್ಗೆ ದೇವಸ್ಥಾನದಲ್ಲಿ ಮೂರ್ತಿಗೆ ವಿಶೇಷ ಪೂಜೆ ಅಭಿಷೇಕ ನಡೆಸಲಾಯಿತು. ನಂತರ ತಳಿರು-ತೋರಣ ಹಾಗೂ ಸರ್ವಾಲಂಕೃತಗೊಂಡ ಅಡ್ಡಪಲ್ಲಕ್ಕಿಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಬೆಳ್ಳಿ ಮೂರ್ತಿ ಇರಿಸಿ ಮಹಿಳೆಯರ ಕಳಸ, ಕುಂಭ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮುಂಡರಗಿ ತಹಸೀಲ್ದಾರ್ ಎರ‌್ರಿಸ್ವಾಮಿ.ಪಿ.ಎಸ್, ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಜಗದೀಶಪ್ಪ ಸಾಹುಕಾರ, ಪ್ರಮುಖರಾದ ಸಿ.ವಿ ಚಂದ್ರಶೇಖರ, ಎಸ್.ಬಿ.ನಾಗರಳ್ಳಿ, ಮಿಥುನಗೌಡ ಪಾಟೀಲ, ಈಶ್ವರಪ್ಪ ಹಂಚಿನಾಳ, ಶೋಭಾ ಮೇಟಿ, ಬಸವರಡ್ಡೆಪ್ಪ ಹಳ್ಳಿಕೇರಿ, ಪ್ರದೀಪಗೌಡ, ಮಹಾಂತೇಶ ಪಾಟೀಲ ಇತರರಿದ್ದರು.