

ಬೆಂಗಳೂರು: ಕೃಷಿಗೆ ಮೂಲ ಆಧಾರವಾಗಿರುವ ಮಣ್ಣಿನ ಸಂರಕ್ಷಣೆಗೆ ಮೊದಲ ಆದ್ಯತೆ ನೀಡುವ ಜತೆಗೆ ಜೀವ ವೈವಿಧ್ಯತೆಗೂ ಅಷ್ಟೇ ಪ್ರಮಾಣದ ಮಹತ್ವ ನೀಡಬೇಕಿದೆ ಎಂದು ಪರಿಸರವಾದಿ ಸುರೇಶ್ ಹೆಬ್ಳೀಕರ್ ತಿಳಿಸಿದರು.
ಬೆಂಗಳೂರು ಕೃಷಿ ವಿವಿಯ ಮಣ್ಣ ವಿಜ್ಞಾನ ಹಾಗೂ ಕೃಷಿ ರಸಾಯನಶಾಸ ವಿಭಾಗ ಜಿಕೆವಿಕೆಯಲ್ಲಿ ಆಯೋಜಿಸಿದ್ದ ‘ವಿಶ್ವ ಮಣ್ಣು ದಿನಾಚರಣೆ’ ಉದ್ಘಾಟಿಸಿ ಗುರುವಾರ ಮಾತನಾಡಿದರು. ಮಣ್ಣಿನ ಜತೆಗೆ ಇತರ ಜೀವ ವೈವಿಧ್ಯತೆಗಳಾದ ಮರ-ಗಿಡ, ನದಿ-ಕೊಳ್ಳ, ಪ್ರಾಣಿ-ಪಕ್ಷಿ, ಹುಲ್ಲುಗಾಲು ಸಂರಕ್ಷಣೆ ಆಗಬೇಕಿದೆ. ಭೂಮಿಯಲ್ಲಿ ಹುಲ್ಲು ಶೇ.24 ಇಂಗಾಲ ಹೀರುವ ಹಾಗೂ ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಂಡು ಸೂಕ್ಷ್ಮಾಣು ಜೀವಿಗಳಿಗೆ ಆಶ್ರಯವನ್ನು ನೀಡುತ್ತದೆ. ಹೀಗಾಗಿ ಹುಲ್ಲುಕಡ್ಡಿ ಮತ್ತು ಹುಲ್ಲುಗಾವಲು ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಪ್ರಸ್ತುತ ಗ್ರಾಮೀಣ ಜನರು ಮೊಬೈಲ್ ಗೀಳಿಗೆ ತುತ್ತಾಗಿ ಕೃಷಿ ಪರಿಸರ ಹಾಗೂ ಜಮೀನಿನ ಕುರಿತು ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ನಗರ ಪ್ರದೇಶಗಳಲ್ಲೂ ಡಾಂಬರು ಮತ್ತು ಕಾಂಕ್ರೀಟ್‌ಗೆ ಒತ್ತು ನೀಡುತ್ತಿರುವ ಕಾರಣ ನೆಲವು ನೀರು ಹೀರುವ ಪ್ರಮಾಣ ಕಡಿಮೆಯಾಗಿ ಜೀವ ವೈವಿಧ್ಯತೆಯನ್ನು ಹಾಳುಗೆಡವಲು ಅವಕಾಶವಾಗಿದೆ. ಇದನ್ನು ಆರ್ಥೈಸಿಕೊಂಡು ಮಣ್ಣು ಹಾಗೂ ಜೀವ ವೈವಿಧ್ಯತೆ ರಕ್ಷಿಸಿಕೊಳ್ಳದಿದ್ದಲ್ಲಿ ಮುಂದಿನ ಪೀಳಿಗೆಯವರಿಗೆ ಪರಿಸರದ ಬಗ್ಗೆ ಕಂಪ್ಯೂಟರ್ ನೋಡಿ ಮಾಹಿತಿ ತಿಳಿದುಕೊಳ್ಳುವ ಸ್ಥಿತಿ ಬರಬಹುದು ಎಂದು ಸುರೇಶ್ ಹೆಬ್ಳೀಕರ್ ಎಚ್ಚರಿಸಿದರು.
ಮಣ್ಣು ಉಳಿಸಿ ಆಂದೋಲನ ಅಗತ್ಯ:
ಕೃಷಿ ವಿವಿಯ ಕುಲಪತಿ ಡಾ. ಎಸ್.ವಿ.ಸುರೇಶ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಣ್ಣಿನ ಫಲವತ್ತತೆಯ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಅಧಿಕ ಪ್ರಮಾಣದ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ಏಕ ಬೆಳೆ ಪದ್ಧತಿಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದೆ. ಇದು ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಪ್ರತೀ ವರ್ಷ ಡಿ.5ರಂದು ಮಣ್ಣಿನ ಸಂರಕ್ಷಣೆಗೆ ಸೀಮಿತವಾಗದೆ ಪ್ರತಿ ದಿನವೂ ಈ ವಿಚಾರದಲ್ಲಿ ಸಕ್ರಿಯವಾಗಲು ಆಂದೋಲನ ನಡೆಸಬೇಕಾದ ಅಗತ್ಯ ಇದೆ ಎಂದು ತಿಳಿಸಿದರು.
ಇದೇ ವೇಳೆ ಮಣ್ಣಿನ ಸಂರಕ್ಷಣೆ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ, ಭಿತ್ತಿಪತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿವಿ ಕುಲಸಚಿವ ಡಾ. ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ. ವೈ.ಎನ್.ಶಿವಲಿಂಗಯ್ಯ, ಡೀನ್ (ಕೃಷಿ) ಡಾ. ಎನ್.ಬಿ.ಪ್ರಕಾಶ್ ಹಾಜರಿದ್ದರು.