

ಸೋಮವಾರಪೇಟೆ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಹೋರಾಡಿದ ಡಿ.ದೇವರಾಜು ಅರಸು ಅವರ ಆದರ್ಶ ಗುಣಗಳನ್ನು ಇಂದು ಎಲ್ಲರೂ ಪಾಲಿಸಬೇಕಿದೆ ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾಜಿಕ ನ್ಯಾಯದ ಪರವಾಗಿ ಹೋರಾಡಿದ ಅರಸು ಅವರು ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ಉಪ ವಲಯ ಅರಣ್ಯಾಧಿಕಾರಿ ಭವ್ಯಾ ಮಾತನಾಡಿ, ದಿ.ದೇವರಾಜು ಅರಸು ಅವರು ಹಿಂದುಳಿದ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗೆ ರಾಜ್ಯದಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿಸಿದರು. ವಿದ್ಯಾರ್ಥಿ ನಿಲಯದಲ್ಲಿ ಇದ್ದು ವ್ಯಾಸಂಗ ಮಾಡಿದ ಅದೆಷ್ಟೋ ಸಂಖ್ಯೆಯ ಬಡವರು, ಶೋಷಿತರು, ದುರ್ಬಲ ವರ್ಗದ ಮಕ್ಕಳು ಇಂದು ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ತಾನೂ ಸಹ ವಸತಿನಿಲಯದಲ್ಲಿ ಇದ್ದು ವ್ಯಾಸಂಗ ಮಾಡಿ ಈ ಹುದ್ದೆ ಪಡೆದುಕೊಂಡಿದ್ದೇನೆ ಎಂದು ಭಾವುಕರಾದರು.
ಜೀತದಾಳು ಹಾಗೂ ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅರ್ಥ ಕಲ್ಪಿಸಿದರು. ಶಿಕ್ಷಣದಲ್ಲಿ ಸಮಾನತೆ ಕಲ್ಪಿಸುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಿರುವುದನ್ನು ಇಂದಿನ ವಿದ್ಯಾರ್ಥಿಗಳು ನೆನಪಿಸಿಕೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿ ಇಒ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿ ನಿಲಯಗಳಲ್ಲಿ ಎಲ್ಲ ಅನುಕೂಲಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಸಿಗುತ್ತಿವೆ. ಉತ್ತಮ ವಿದ್ಯಾಭ್ಯಾಸ ಪಡೆಯುವ ಮೂಲಕ ಸರ್ಕಾರದ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಇದೇ ಸಂದರ್ಭ ಆಲೂರು ಸಿದ್ದಾಪುರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಾದ ಪ್ರೀತಂ, ಸಾಕ್ಷಿ, ಮಹೇಶ್ ಹಾಗೂ ಸೋಮವಾರಪೇಟೆ ವಿದ್ಯಾರ್ಥಿನಿಲಯದ ವನಿತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬೆಂಗಳೂರಿನಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಜಯಗಳಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ತಂಡದಲ್ಲಿ ರಾಜ್ಯ ಸರ್ಕಾರಿ ನೌಕರರ ಹಾಕಿ ತಂಡದಲ್ಲಿ ಪಾಲ್ಗೊಂಡಿದ್ದ ಸೋಮವಾರಪೇಟೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಅವರನ್ನು ಗೌರವಿಸಲಾಯಿತು.