

ಪಾಂಡವಪುರ : ಡಾ.ಶಿವಕುಮಾರ ಸ್ವಾಮೀಜಿ ಭಕ್ತರ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ಒದಗಿಸಿದರು ಎಂದು ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಐದು ದೀಪ ವೃತ್ತದಲ್ಲಿ ವೀರಶೈವ ಲಿಂಗಾಯತ ಮಹಾಸಭಾ, ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘ, ಡಾ.ಶಿವಕುಮಾರ ಸ್ವಾಮೀಜಿಯ 5ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಶಿವಕುಮಾರ ಸ್ವಾಮೀಜಿ ಹಿಂದೆ ಪಾಂಡವಪುರ ತಾಲೂಕಿನ ಚಾಗಶೆಟ್ಟಹಳ್ಳಿ, ಚಿಕ್ಕಯಾರಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ಆಗಮಿಸಿ ಭಿಕ್ಷಾಟನೆ ಮಾಡುತ್ತಿದ್ದರು. ಮಂಡ್ಯ ಜಿಲ್ಲೆಯ ಜನತೆ ಸ್ವಾಮೀಜಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಎಂದು ತಿಳಿಸಿದರು.
ಸಿದ್ಧಗಂಗಾ ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಸ್ವಾಮೀಜಿಗಳ ಸುದೀರ್ಘ ಸೇವೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಆಶ್ರಯ ಪಡೆದು ಭವಿಷ್ಯ ರೂಪಿಸಿಕೊಂಡಿದ್ದಾರೆ. ಸಾಹಿತಿಗಳು, ಕವಿಗಳು, ಚಲನಚಿತ್ರ ನಟರು, ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಶ್ರೀಗಳ ಆಶೀರ್ವಾದದಿಂದ ಉನ್ನತ ಸ್ಥಾನಕ್ಕೆ ತಲುಪಿದ್ದಾರೆ. ಅವರ ಸ್ಮರಣಾರ್ಥ ದಾಸೋಹ ನಡೆಸುತ್ತಿರುವುದು ಸಂತಸ ವಿಷಯ ಎಂದರು.
ಭಾರತ ರತ್ನಕ್ಕೆ ಆಗ್ರಹ : ಡಾ.ಶಿವಕುಮಾರ ಸ್ವಾಮೀಜಿ ಅವರ ನಿಸ್ವಾರ್ಥ ಸೇವೆ, ಜನಪರ ಕಾಳಜಿ, ಶಿಕ್ಷಣ ಕ್ಷೇತ್ರದ ಕಾಂತ್ರಿ, ತ್ರಿವಿಧ ದಾಸೋಹದಂತಹ ಹಲವು ಸಾಮಾಜಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಭಾರತ ರತ್ನಕ್ಕೆ ಆಗ್ರಹಿಸಬೇಕು ಎಂದು ಆಗ್ರಹಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ವೀರಶೈವ ಮಹಾಸಭಾ ಅಧ್ಯಕ್ಷ ನಿರಂಜನ್ ಬಾಬು, ಮಾಜಿ ಅಧ್ಯಕ್ಷ ಎಸ್.ಮಂಜುನಾಥ್, ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘದ ರಾಜ್ಯ ನಿರ್ದೇಶಕ ಶಿವಕುಮಾರ್, ತಾಲೂಕು ಅಧ್ಯಕ್ಷ ಆನುವಾಳು ವಿಶ್ವನಾಥ್, ಮುಖಂಡರಾದ ಅಮೃತಿ ರಾಜಶೇಖರ್, ಮಂಡಿಬೆಟ್ಟಹಳ್ಳಿ ಜಗದೀಶ್, ಆಗನಹಳ್ಳಿ ಜಗದೀಶ್, ಕೆ.ಎಲ್.ಆನಂದ್, ತಾಳಶಾಸನ ಬಸಂತ್, ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಇತರರು ಇದ್ದರು.