ಕಾನೂನಿಗೆ ಬೆಲೆ ಕೊಡುವ ಸಿದ್ದರಾಮಯ್ಯ ರಾಜೀನಾಮೆ ನೀಡಲಿ

Somanna New
Published on

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನಿಗೆ ತುಂಬ ಗೌರವ ಕೊಡುತ್ತಾರೆ. ಅವರ ಜೀವನವೆಂಬ ತೆರೆದ ಪುಸ್ತಕದಲ್ಲಿ ಒಂದಷ್ಟು ತಪ್ಪುಗಳಾಗಿವೆಯೆಂಬುದನ್ನು ಕಾನೂನು ತೋರಿಸಿಕೊಟ್ಟಿದೆ. ಹೀಗಾಗಿ, ಅವರು ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು, ಸಂವಿಧಾನ ಎಲ್ಲರಿಗೂ ಒಂದೇ ಎಂಬುದನ್ನು ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಅವರವಿರುದ್ಧ ಬಿಜೆಪಿಯವರು ಷಡ್ಯಂತ್ರ ಮಾಡುತ್ತಿದ್ದಾರೆಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಆರೋಪದಲ್ಲಿ ಹುರುಳಿಲ್ಲ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನಕ್ಕೆ ತಲೆ ಬಾಗುವುದು ನಮ್ಮ ಕರ್ತವ್ಯ ಎಂದರು.

ಸಿದ್ದರಾಮಯ್ಯ ಅವರನ್ನ ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರೊಂದಿಗೆ ಹಲವು ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಕಾನೂನನ್ನು ಗೌರವಿಸುವ ವ್ಯಕ್ತಿ. ನಾನು ತೆರೆದ ಪುಸ್ತಕ ಎಂದು ಪದೇ ಪದೇ ಹೇಳುವ ಸಿದ್ದರಾಮಯ್ಯ ಮೊದಲು ರಾಜೀನಾಮೆ ಕೊಡಬೇಕು. ಕ್ಲೀನ್ ಚಿಟ್ ಸಿಕ್ಕ ಮೇಲೆ ಮತ್ತೆ ಮುಖ್ಯಮಂತ್ರಿ ಆಗಿ ಮುಂದುವರೆಯಬಹುದು ಎಂದು ಹೇಳಿದರು.

ಸಿದ್ದರಾಮಯ್ಯ ರಾಜೀನಾಮೆಗೆ ಮೊಂಡತನ ಮಾಡುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಇದಕ್ಕೂ ಮೊದಲು ಘಟಾನುಘಟಿ ನಾಯಕರು ತಮ್ಮ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಿದ ಉದಾಹರಣೆ ನೋಡಿದ್ದೇವೆ. ಉಚ್ಚ ನ್ಯಾಯಾಲಯ ಮತ್ತು ಜನಪ್ರತಿನಿಧಿ ನ್ಯಾಯಾಲಯದ ಆದೇಶಕ್ಕೆ ಸಿದ್ದರಾಮಯ್ಯ ತಲೆ ಬಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಬಿಜೆಪಿ ಬಣ ರಾಜಕೀಯದ ಕುರಿತು ಪ್ರತಿಕ್ರಿಯೆ ನೀಡಿದ ವಿ. ಸೋಮಣ್ಣ, ನಮ್ಮಲ್ಲಿ ಬಣ ರಾಜಕಾರಣ ಇಲ್ಲ. ನಮ್ಮದು ಹೈ ಕ್ಲಾಸ್ ರಾಜಕಾರಣ. ಮನೆಯಲ್ಲಿ ಹೆಚ್ಚಿನ ಜನ ಬುದ್ಧಿವಂತರಿದ್ದಾಗ ಬಿನ್ನಾಭಿಪ್ರಾಯ ಸಹಜ. ಅದನ್ನು ನಮ್ಮ ಪಕ್ಷದ ನಾಯಕರು ಸರಿ ಮಾಡ್ತಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net