ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಲಿ

shetter
Published on

ಹುಬ್ಬಳ್ಳಿ: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಬಹಳಷ್ಟು ಕೈ ನಾಯಕರು ಒಳಗೊಳಗೆ ಖುಷಿಪಡುತ್ತಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಅವರು ಪಾರಾಗಲು ಸಾಧ್ಯವಿಲ್ಲ. ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಾರೋ ಇಲ್ಲವೋ ಎನ್ನುವ ಚರ್ಚೆ ನಡೆಯುತ್ತಿತ್ತು. ನಾವು ಕೂಡ ಮುಡಾರ ಮತ್ತು ವಾಲ್ಮೀಕಿ ಹಗರಣ ತನಿಖೆ ನಡೆಸಲು ಹೋರಾಟ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ 14 ಸೈಟ್ ಪಡೆದಿರುವುದು ಸರಿಯಲ್ಲ. ಇದು ಕಾನೂನು ಬಾಹಿತ ಕೆಲಸ. ತನಿಖೆ ಆರಂಭ ಆದ ಮೇಲೆ ರಾಜೀನಾಮೆ ಕೊಡುತ್ತಾರೋ ಇಲ್ಲವೋ ಈಗಲೇ ಕೊಡುತ್ತಾರೋ ನೋಡಬೇಕು. ಆದರೂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಅನಿವಾರ್ಯ ಎಂದರು.
ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಕ್ರಮ ಕೈಗೊಂಡಿದ್ದಾರೆ. ಕಾನೂನು ತಿಳಿದುಕೊಂಡಿದ್ದೇನೆ ಎನ್ನುವ ಸಿದ್ದರಾಮಯ್ಯ ಅವರು ಈಗ ಏನು ಹೇಳುತ್ತಾರೆ? ಶಶಿಕಲಾ ಜೊಲ್ಲೆ ವಿಚಾರ ಪ್ರಾಸಿಕ್ಯೂಷನ್‌ಗೆ ಕೊಡಲಿಲ್ಲ ಎಂದು ಈಗ ಹೇಳುವುದು ಸರಿಯಲ್ಲ. ಅದರ ಬಗೆಗೆ ವಿರೋಧ ಪಕ್ಷ ನಾಯಕರಾಗಿ ಧ್ವನಿ ಎತ್ತಿಲ್ಲ ಎಂದು ದೂರಿದರು.
ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾರಾಗಿದ್ದರು. ಈ ಬಾರಿ ಪಾರಾಗುವ ಪ್ರಮೇಯ ಬರುವುದಿಲ್ಲ. ಪ್ರಾಸಿಕ್ಯೂಷನ್ ವಿರುದ್ಧವಾಗಿ ಹೈಕೋರ್ಟ್, ಸುಪ್ರಿಂಕೋರ್ಟ್‌ಗೂ ಹೋಗಬಹುದು. ಇದನ್ನು ನೋಡಿಕೊಂಡು ನಾವು ಪ್ರತಿಭಟನೆ ನಿರ್ಧಾರ ಕೈಗೊಳ್ಳುತ್ತೇವೆ. ಈ ಪ್ರಕರಣದಲ್ಲಿ ಜಾತಿ, ಧರ್ಮ ತರಬಾರದು. ಅಹಿಂದ ನಾಯಕನನ್ನು ಗುರಿಯಾಗಿಸಿದ್ದಾರೆ ಎನ್ನುವ ವಿಚಾರ ಬೇಡ. ನಾನು ಅಹಿಂದ ನಾಯಕ, ನಾನೂ ಕಾನೂನು ಬಾಹಿರ ಕೆಲಸ ಮಾಡಬಹುದು ಎನ್ನಲು ಬರುತ್ತದೆಯೇ? ತಪ್ಪು ಮಾಡಿಲ್ಲ ಎಂದ ಮೇಲೆ ಸಿದ್ದರಾಮಯ್ಯ ಹೆದರುವುದು ಏಕೆ? ಎಂದು ಪ್ರಶ್ನೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷದ ಆಡಳಿತದಲ್ಲಿ ಒಂದಾದರೂ ಹಗರಣ ಇವೆಯಾ? ಅವರು ಕೂಡ ಅಹಿಂದ ನಾಯಕರು. ನೀವು ಅದೇ ರೀತಿ ಪ್ರಾಮಾಣಿಕವಾಗಿ ಆಡಳಿತ ನಡೆಸಬಹುದಿತ್ತಲ್ಲ. ರಾಜ್ಯಪಾಲರ ಎರಡು ವರ್ಷದ ಅವಧಿಯಲ್ಲಿ ಒಂದಾದರೂ ವಿವಾದ ಇದೆಯೇ ? ಜಾತಿ ಬಣ್ಣ ಬಳಿಯೋದು ಬೇಡ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net