

ಶಿವಮೊಗ್ಗ: ಎಸ್‌ಐಟಿ ತನಿಖೆ ಮೂಲಕ ಸಚಿವರ ಹಗರಣಗಳನ್ನು ಮುಚ್ಚಿಡುತ್ತಿದ್ದ ಸಿಎಂ ಸಿದ್ದರಾಮಯ್ಯ ಈಗ ಮುಡಾ ಹಗರಣದಲ್ಲಿ ಸ್ವತಃ ಸಿಲುಕಿಕೊಂಡಿದ್ದಾರೆ. ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ಅಸ್ತು ಎಂದಿರುವುದರಿಂದ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಮಂಗಳವಾರ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಡಾ ಹಗರಣದ ಬಗ್ಗೆ ಸಮರ್ಪಕ ತನಿಖೆ ನಡೆಸುತ್ತೇನೆ ಎಂದು ವಿಧಾನಸಭೆಯಲ್ಲಿ ಬುದ್ದಿವಂತಿಕೆಯ ಹೇಳಿಕೆ ನೀಡಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂದು ಆರೋಪಿಸಿದರು.
ಸಂವಿಧಾನಕ್ಕೆ ತಲೆಬಾಗಿ, ರಾಜ್ಯದ ಗೌರವ ಉಳಿಸಿ ಎಂದು ಬಿಜೆಪಿ ಬೀದಿಗಿಳಿದು ಹೋರಾಟ ಮಾಡಿದರೂ ಸಿದ್ದರಾಮಯ್ಯ ತಲೆಬಾಗಲಿಲ್ಲ. ಸಾಂವಿಧಾನಿಕ ಮಹತ್ವದ ರಾಜ್ಯಪಾಲ ಹುದ್ದೆಗೆ ಅಗೌರವ ತೋರಿದರು. ಕಾಂಗ್ರೆಸ್‌ನ ರಕ್ತದಲ್ಲೇ ಭ್ರಷ್ಟಾಚಾರ ಸೇರಿಕೊಂಡಿದೆ. ಹೀಗಾಗಿ ಸಂವಿಧಾನದ ಕ್ರಮವನ್ನು ಕಾಂಗ್ರೆಸ್ ಒಪ್ಪುವುದಿಲ್ಲ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸಲಾಯಿತು. ಸಚಿವರಾಗಿದ್ದ ಬಿ.ನಾಗೇಂದ್ರ ಅವರಿಗೆ ಕ್ಲೀನ್‌ಚಿಟ್ ನೀಡಲಾಯಿತು. ಮುಡಾ ಹಗರಣದ ಮೂಲಕ ಬಡವರಿಗೆ ಸೇರಬೇಕಾದ ನಿವೇಶನವನ್ನು ಸಿಎಂ ಕುಟುಂಬ ಪಡೆದುಕೊಂಡಿದೆ. ಅವು ಸಾವಿರಾರು ಕೋಟಿ ರೂ. ಬೆಲೆಬಾಳುವ ನಿವೇಶನಗಳಾಗಿವೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಕಾಂಗ್ರೆಸ್ ಲೂಟಿಯಲ್ಲಿ ತೊಡಗಿದೆ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್, ಮಾಜಿ ಉಪಮೇಯರ್ ಸುರೇಖಾ ಮುರಳೀಧರ್, ಪ್ರಮುಖರಾದ ಸಂತೋಷ್ ಬಳ್ಳೇಕೆರೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.