

ಹುಬ್ಬಳ್ಳಿ : ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮುಡಾ ಆಯುಕ್ತರಿಗೆ ಪತ್ರ ಬರೆದು, 14 ಸೈಟ್ಗಳನ್ನು ಹಿಂತಿರುಗಿಸುವುದಾಗಿ ಹೇಳಿದ್ದನ್ನು ಗಮನಿಸಿದರೆ ಮುಖ್ಯಮಂತ್ರಿ ಅವರು ಮಾಡಿರುವ ಹಗರಣವನ್ನು ಒಪ್ಪಿಕೊಂಡಂತಾಗಿದೆ. ಈಗಲಾದರೂ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದ್ದಾರೆ.
ಮುಡಾ ಹಗರಣದ ತನಿಖೆ ಈಗಾಗಲೇ ಆರಂಭಗೊಂಡಿದೆ. ಈ ಸಮಯದಲ್ಲಿ ಸೈಟ್ಗಳನ್ನು ವಾಪಸ್ ನೀಡುತ್ತೇವೆ ಎಂದಾಕ್ಷಣ ಹಗರಣದ ಕಥೆ ಮುಗಿಯುವುದಿಲ್ಲ. ಈಗಾಗಲೇ ಇಡಿ ಕೇಸ್ ದಾಖಲಾಗಿದೆ. ಭ್ರಷ್ಟಾಚಾರಗಳ ಸತ್ಯಾಂಶಗಳು ಬರುವ ದಿನಗಳಲ್ಲಿ ಮುಡಾ ಹಗರಣ ಸಂಪೂರ್ಣ ಹೊರ ಬರಲಿದೆ ಎಂದು ಹೇಳಿದ್ದಾರೆ.
ಮುಡಾ ಪ್ರಕರಣದ ಸತ್ಯಾಂಶ ಹೊರಬರಲು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದ ಒಳಗಡೆ ಅಹೋರಾತ್ರಿ ಧರಣಿ ಮಾಡಿದ್ದೇವೆ ಹಾಗೂ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡುವ ಮೂಲಕ ಹೋರಾಟ ಮಾಡಿದ್ದೇವೆ ಎಂದು ಶಾಸಕ ಟೆಂಗಿನಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ನಲ್ಲಿ ಪಟ್ಟಕ್ಕಾಗಿ ಅನೇಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅವರ ಪಕ್ಷದವರೇ ಬೇಗ ರಾಜೀನಾಮೆ ನೀಡಿ ಎಂದು ಹೇಳುತ್ತಿದ್ದಾರೆ ಎಂದು ಟೆಂಗಿನಕಾಯಿ ವ್ಯಂಗ್ಯವಾಡಿದ್ದಾರೆ.