

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಯೋಧ್ಯೆಗೆ ಹೋಗಿ ತಮ್ಮ ಪಾಪ ಕಳೆದುಕೊಂಡು ಬರಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅಯೋಧ್ಯಗೆ ಹೊಗಲ್ಲ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಒಳ್ಳೆ ಬುದ್ದಿ ನೀಡಲೆಂದು ದೇವರಲ್ಲಿ ಕೇಳಿಕೊಂಡಿದ್ದೇವು. ಆದರೆ ಸಿದ್ದರಾಮಯ್ಯ ಉದ್ಘಾಟನೆ ನಂತರ ಹೋಗುತ್ತೇನೆ ಎಂದಿದ್ದರು. ಅದನ್ನು ನಾನೇ ಸ್ವಾಗತಿಸಿದ್ದೆ. ಇದೀಗ ಅಯೋಧ್ಯೆಗೆ ಹೋಗಲ್ಲವೆಂದು ಮತ್ತೆ ಯೂಟರ್ನ್ ಹೊಡೆದಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಯೂಟರ್ನ್ ಹೊಡೆದಿದ್ದರು. ಇದೀಗ ರಾಮಮಂದಿರದ ಬಗ್ಗೆಯೂ ಯೂಟರ್ನ್ ಹೊಡೆಯುತ್ತಿದ್ದಾರೆ. ಈ ಧ್ವಂಧ್ವ ಯಾಕೆ ಎಂದು ಪ್ರಶ್ನಿಸಿದರು. ರಾಮಮಂದಿರ ವಿಚಾರದಲ್ಲಿ ನಾವು ರಾಜಕೀಯ ಮಾಡಿಲ್ಲ. ರಾಮ ಭಕ್ತರು ಎಲ್ಲರೂ ಬರಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದರು.
ಆಗಿನ ಕಾಲದಲ್ಲಿ ಹೋರಾಟ ಮಾಡಿದ್ದು ಕೇವಲ ರಸ್ತೆ ನೀರು ಚರಂಡಿ ನಿರ್ಮಾಣಕ್ಕೆ ಮಾತ್ರವಲ್ಲ. ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದರು. ಅದರ ಫಲವೇ ಈಗಿನ ಅಯೋಧ್ಯ ರಾಮಮಂದಿರ ಎಂದರು.