

ನರಗುಂದ: ಎಪಿಎಂಸಿ ಅಭಿವೃದ್ಧಿಗೆ ಹಗಲಿರುಳು ಹಮಾಲರು ದುಡಿಯುತ್ತಿದ್ದಾರೆ. ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಎಪಿಎಂಸಿ ಆವರಣದಲ್ಲಿ ಶ್ರಮಿಕರ ಭವನ ನಿರ್ಮಾಣ ಮಾಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಶ್ರಮಿಕರ ಭವನ, 15 ಲಕ್ಷ ರೂ. ವೆಚ್ಚದ ಕ್ಯಾಂಟೀನ್, 40 ಲಕ್ಷ ರೂ. ವೆಚ್ಚದಲ್ಲಿ ಕೊಣ್ಣೂರ ಹಾಗೂ ಶಿರೋಳದ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಬಾಕಿಯಿರುವ ಕಾಂಪೌಂಡ್ ನಿರ್ಮಾಣ ಹಾಗೂ ಕೇಂದ್ರಿಯ ರಸ್ತೆ ಅಭಿವೃದ್ಧಿ ನಿಧಿ ಯೋಜನೆಯಡಿ ಬಿಡುಗಡೆಗೊಂಡಿರುವ 3.16 ಕೋಟಿ ರೂ. ವೆಚ್ಚದಲ್ಲಿ ಬನಹಟ್ಟಿ- ಮೂಗನೂರ, ಅಮರಗೋಳ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
102 ಎಕರೆ ವಿಸ್ತೀರ್ಣದ ನರಗುಂದ ಎಪಿಎಂಸಿ ಪ್ರಾಂಗಣದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸಚಿವನಾಗಿದ್ದಾಗ ವಿವಿಧೆಡೆ ಹರಿದು ಹಂಚಿ ಹೋಗಿದ್ದ ವರ್ತಕರ ಅಂಗಡಿಗಳನ್ನು ಒಂದೆಡೆ ಮುಕ್ತ ವ್ಯಾಪಾರ- ವಹಿವಾಟು ನಡೆಸಲು ಎಪಿಎಂಸಿ ಆವರಣದಲ್ಲಿ ಸಂಪೂರ್ಣ ಸ್ಥಳಾಂತರ ಮಾಡಿಕೊಟ್ಟಿದ್ದೇನೆ. ಇದರಿಂದ ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವುದರ ಜತೆಗೆ ಹೆಚ್ಚುವರಿ ಆವಕದಿಂದಾಗಿ ಇಲ್ಲಿನ ಎಪಿಎಂಸಿಗೆ 2.5 ಕೋಟಿ ರೂಪಾಯಿ ಸೆಸ್ ಸಂಗ್ರಹವಾಗುತ್ತಿದೆ ಎಂದರು.
ಜಿಲ್ಲೆಗೆ ನರಗುಂದ ಎಪಿಎಂಸಿ ಮಾದರಿಯಾಗಿದೆ. ಸಣ್ಣಪುಟ್ಟ ವ್ಯಾಪಾರಸ್ಥರಿಗೆ 25 ಮಳಿಗೆಗಳನ್ನು ನಿರ್ವಿುಸಲಾಗಿದೆ. 900ಕ್ಕೂ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿತ್ತು. ಇದರಲ್ಲಿ 500ಕ್ಕೂ ಹೆಚ್ಚು ಸಸಿಗಳು ಉತ್ತಮವಾಗಿ ಬೆಳೆದಿವೆ. ಅವುಗಳ ಸಂರಕ್ಷಣೆಗೆ ವರ್ತಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಎಪಿಎಂಸಿ ಆವರಣದ ಶಿರಡಿ ಸಾಯಿಬಾಬಾ ದೇವಸ್ಥಾನದ ನಿರ್ಮಾಣ ಅರ್ಧಕ್ಕೆ ನಿಂತಿದೆ. ದೇವಸ್ಥಾನ ಸೇರಿ ಸುಸಜ್ಜಿತ ಶ್ರಮಿಕರ ಭವನ ನಿರ್ವಣಕ್ಕೆ ಬೇಕಾದ ಹಣಕಾಸಿನ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ, ಜಿ.ಟಿ.ಗುಡಿಸಾಗರ, ಯಲ್ಲಪ್ಪಗೌಡ ಬನಹಟ್ಟಿ, ಎನ್.ವಿ. ಮೇಟಿ, ಎಸ್.ಬಿ. ಯಲ್ಲಪ್ಪಗೌಡ್ರ, ಎನ್.ಕೆ. ಸೋಮಾಪೂರ, ಸಂಭಾಜಿ ಕಾಶೀದ, ಬಾಪುಗೌಡ ಪಾಟೀಲ, ಶಿವಪ್ಪ ಬೋಳಶೆಟ್ಟಿ, ಆನಂದ ಚಂದ್ರತ್ನವರ, ರಾಜುಗೌಡ ಪಾಟೀಲ, ದೇವಣ್ಣ ಕಲಾಲ, ವಿಠ್ಠಲ ಹವಾಲ್ದಾರ, ಬಸು ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಹನುಮಂತ ಹವಾಲ್ದಾರ, ಬಸಪ್ಪ ಮಳಗಿ, ಕೊಟ್ರೇಶ ಕೊಟ್ಟರಶೆಟ್ಟಿ, ಎಸ್.ಬಿ. ಕರಿಗೌಡ್ರ, ಮಂಜುನಾಥ ಆನೇಗುಂದಿ, ಸಿದ್ದಪ್ಪ ಯಲಿಗಾರ, ಮಹೇಶ ಹಟ್ಟಿ, ರಾಘವೇಂದ್ರ ಸಜ್ಜನ, ನವೀನಗೌಡ ಪಾಟೀಲ, ಎಸ್.ಬಿ. ಅಬ್ಬಿಗೇರಿ, ಎಂ.ಎಂ. ಭಾವಿಕಟ್ಟಿ, ಪ್ರದೀಪಕುಮಾರ ಕೊಪ್ಪದ ಇತರರಿದ್ದರು.
ಅಧಿಕಾರ ತಪ್ಪಿದ್ದಕ್ಕೆ ಯಾವಗಲ್ಲ ಚಡಪಡಿಕೆ
ಬಿ..ಆರ್. ಯಾವಗಲ್ಲ ಅವರಿಗೆ ಈ ಬಾರಿ ಶಾಸಕ ಸ್ಥಾನ ಸಿಗದಿದ್ದಕ್ಕೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ನ ಗ್ಯಾರಂಟಿ ಅಲೆಯಲ್ಲಿ 136 ಜನ ಗೆದ್ದರೂ ನಾನು ಗೆದ್ದು ಬರಲಿಲ್ಲ ಎಂದು ಹತಾಶೆಯಿಂದ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಿದ್ದಾರೆ. ಕಾಂತರಾಜು ವರದಿ ಬಗ್ಗೆ ಪ್ರಸ್ತಾಪಿಸಿರುವ ಯಾವಗಲ್ಲ ಅವರು, ತಮಗೆ ಎಂಎಲ್ಎ, ಮಗನಿಗೆ ಬ್ಲಾಕ್ ಕಾಂಗ್ರೆಸ್, ಮತ್ತೊಬ್ಬ ಮಗನಿಗೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿ, ಪ್ರಮುಖ ಸ್ಥಾನಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡು ತೋರಿರುವ ಸಾಮಾಜಿಕ ಕಳಕಳಿ ನಿಜಕ್ಕೂ ಮೆಚ್ಚಬೇಕಿದೆ ಎಂದು ವ್ಯಂಗ್ಯವಾಡಿದರು. ಬ್ಲಾಕ್ ಕಾಂಗ್ರೆಸ್ನಿಂದ ಬೇರೆಯವರ ಹೆಸರು ಆಯ್ಕೆ ಮಾಡಿ ಕಳಿಸಿದರೆ ತಮಗೆ ಟಿಕೆಟ್ ಕೈ-ತಪ್ಪಬಹುದೆಂಬ ಆತಂಕವಿರಬಹುದು. ಹೀಗಾಗಿ ಎಲ್ಲ ಹುದ್ದೆಗಳಿಗೆ ತಮ್ಮ ಮನೆಯವರನ್ನೇ ನೇಮಿಸಿಕೊಂಡು ಸಾಮಾಜಿಕ ಕಳಕಳಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.