ದೀಪದ ಬೆಳಕಲ್ಲಿ ಶಿವಪೂಜೆ ನಡೆಯಲಿ

Let Shiva Puja take place in the light of lamp
ಮುದ್ದೇಬಿಹಾಳದಲ್ಲಿ ಕುಮಾರ ವಿರೂಪಾಕ್ಷ ಸ್ವಾಮೀಜಿಯವರು ಶುಕ್ರವಾರ ನಸುಕಿನಲ್ಲಿ ನಡೆಸಿಕೊಟ್ಟ ಇಷ್ಠಲಿಂಗ ಪೂಜೆಯಲ್ಲಿ ಪುರಾಣ ಕಮಿಟಿ ಮುಖಂಡರಾದ ಸಂಗಮೇಶ ನಾವದಗಿ, ರಾಜು ಜೋಳದ, ಶರಣು ಸಜ್ಜನ, ಐ.ಆರ್. ಹಿರೇಮಠ, ಲೋಹಿತ ಅಮರಣ್ಣವರ ಮತ್ತಿತರರು ಇದ್ದರು.
Published on

ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಪ್ರೌಢಶಾಲೆ ಮೈದಾನದ ಸಿದ್ಧೇಶ್ವರ ಸ್ವಾಮೀಜಿ ವೇದಿಕೆಯಲ್ಲಿ ಶುಕ್ರವಾರ ನಸುಕಿನ ಜಾವ ಧಾರವಾಡ ಜಿಲ್ಲೆ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಶಿವಯೋಗ ಮತ್ತು ಲಿಂಗದೀಕ್ಷೆ ನಡೆಸಿಕೊಟ್ಟರು.

ಡಿ. 31ರವರೆಗೆ ನಡೆಯಲಿರುವ ಲಿಂಗದೀಕ್ಷೆಯ ಮೊದಲ ದಿನವೇ ಅಂದಾಜು 400 ಜನರು ಪಾಲ್ಗೊಂಡು ಸಾಮೂಹಿಕವಾಗಿ ಲಿಂಗದೀಕ್ಷೆ, ಲಿಂಗ ಪೂಜಾ ಪದ್ಧತಿ ಪಾಲಿಸಿದ್ದು ವಿಶೇಷವಾಗಿತ್ತು. ಲಿಂಗಪೂಜೆಯ ಮೂರು ಹಂತಗಳನ್ನು ಸಾಮೂಹಿಕವಾಗಿ ವಿವರಿಸಿದ ಸ್ವಾಮೀಜಿಯವರು ದೇವರ ಕೋಣೆಯೊಳಗೆ ಹೋದಾಗ ಲಿಂಗಪೂಜೆ ಹೇಗಿರಬೇಕು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಮಾಡಿ ತೋರಿಸಿ ಎಲ್ಲರೂ ಅನುಕರಿಸುವಂತೆ ಸೂಚಿಸಿದರು.

ಸಾಮೂಹಿಕ ಪ್ರಾತ್ಯಕ್ಷಿಕೆಯ ನಂತರ ಈ ಪದ್ಧತಿಯನ್ನು ಮನೆಯಲ್ಲಿ ನಿತ್ಯವೂ ಪಾಲಿಸುವಂತೆ ಸಲಹೆ ನೀಡಿದ ಸ್ವಾಮೀಜಿ, ದೀಪವು ಲಿಂಗಪೂಜೆಗೆ ಅತ್ಯಗತ್ಯವಾಗಿದೆ. ದೀಪದ ಬೆಳಕಿನೊಳಗೆ ಶಿವನ ಪೂಜೆ ನಡೆಯಬೇಕು. ಪೂಜೆ ಮಾಡುವಾಗ ವಿಭೂತಿ ಭಿನ್ನವಾಗದಂತೆ ಜಾಗ್ರತೆ ವಹಿಸಬೇಕು. ವಿಭೂತಿಯ ಮೇಲೆ ಗೆರೆಯ ಮಾದರಿಯಲ್ಲಿ ಗುರ್ತು ಮಾಡಿ ವಿಭೂತಿ ಹಚ್ಚಿಕೊಳ್ಳದೆ ವಿಭೂತಿಯ ಮೇಲ್ಭಾಗದಲ್ಲಿ ಮಗುವಿನ ತಲೆ ಸವರುವ ಮಾದರಿಯಲ್ಲಿ ಬೆರಳಾಡಿಸಿ ಹಚ್ಚಿಕೊಳ್ಳಬೇಕು. ಗುರು, ಲಿಂಗ, ಜಂಗಮ ಎನ್ನುತ್ತ ಮೂರು ಬೆರಳುಗಳಿಂದ ಮೂರು ಬಾರಿ ಹಚ್ಚಿಕೊಳ್ಳಬೇಕು ಎಂದರು.

ಪೂಜಾ ಸಾಮಗ್ರಿಗಳು ನಮ್ಮ ಧರ್ಮದ ವಸ್ತುಗಳು. ಇವುಗಳನ್ನು ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕು. ಲಿಂಗಪೂಜೆಯ ಅಂತಿಮ ಹಂತದಲ್ಲಿ ಎಡಗೈನ ಹಸ್ತದ ಅಂಗಳದಲ್ಲಿಟ್ಟುಕೊಂಡಿರುವ ಲಿಂಗಕ್ಕೆ ಮುಖವಿದ್ದು ಆ ಮುಖವನ್ನೇ ತದೇಕ ಚಿತ್ತದಿಂದ ನೋಡುವುದನ್ನು ರೂಢಿಸಿಕೊಂಡಲ್ಲಿ ಆ ಲಿಂಗದೊಳಗೆ ಜ್ಯೋತಿ ಕಾಣಿಸುತ್ತದೆ. ಜ್ಯೋತಿ ಕಾಣಿಸಿದಾಗ ಅದು ನಿಜವಾದ ಭಕ್ತಿ ಎನ್ನಿಸಿಕೊಳ್ಳುತ್ತದೆ ಎಂದು ವಿವರಿಸಿ ಲಿಂಗವನ್ನು ದಿಟ್ಟಿಸಿ ನೋಡುವಾಗ ಉಸಿರಾಟ ಪ್ರಕ್ರಿಯೆ ಸಹಜವಾಗಿರಬೇಕು ಎಂದರು.

ಗುರುಗಳು ಲಿಂಗದೀಕ್ಷೆ ನೀಡುವಾಗ ಕಿವಿಯಲ್ಲಿ ರಹಸ್ಯವಾಗಿ ಹೇಳುವ ಪ್ರಣವ ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಇದು ಅತ್ಯಂತ ಶಕ್ತಿಯುತವಾದ ಮಂತ್ರವಾಗಿದ್ದು, ಇದನ್ನು 108 ಬಾರಿ ಜಪಿಸಿದರೆ ಸದ್ಗತಿ ಪ್ರಾಪ್ತವಾಗುತ್ತದೆ. ನಾವು ಪೂಜಿಸುವ ಲಿಂಗವು ಸ್ವಚ್ಛವಾಗಿದ್ದು ಮಿರಿಮಿರಿ ಮಿಂಚುತ್ತಿರಬೇಕು. ಪೂಜೆಯ ಕೊನೆಗೆ ಹೂ, ಪತ್ರಿಗಳಿಂದ ಅಲಂಕರಿಸಿದ ಮೇಲೆ ಮತ್ತೊಮ್ಮೆ ಅದನ್ನು ಸ್ವಚ್ಛಗೊಳಿಸಿ ಗುಂಡಗಡಗಿಯಲ್ಲಿ ಅಥವಾ ಅದಕ್ಕಾಗಿ ಇರುವ ಸಣ್ಣ ಬಟ್ಟೆಯ ಚೀಲದಲ್ಲಿ ಹಾಕಿ ಮುಚ್ಚಿಡಬೇಕು ಎಂದರು.

ಸಾಮೂಹಿಕ ಲಿಂಗಪೂಜಾ ಕಾರ್ಯ ಮುಕ್ತಾಯವಾದ ಮೇಲೆ ಕೋಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಆರ್.ಜಿ. ಕಿತ್ತೂರ ಲಿಂಗಪೂಜೆ ಕುರಿತು ಮಾತನಾಡಿ, ಪ್ರತಿಯೊಬ್ಬರು ಪಾಲಿಸುವಂತೆ ಸಲಹೆ ನೀಡಿದರು.

ಪುರಾಣ ಸಮಿತಿಯ ಪ್ರಮುಖರಾದ ಶರಣು ಸಜ್ಜನ, ಸಂಗಮೇಶ ನಾವದಗಿ, ರಾಜು ಜೋಳದ, ಐ.ಆರ್. ಹಿರೇಮಠ, ಲೋಹಿತ ಅಮರಣ್ಣವರ ಮತ್ತಿತರರು ಇದ್ದರು. ಕಮಿಟಿ ವತಿಯಿಂದ ಭಕ್ತರಿಗೆ ಅಲ್ಪೋಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net