

ಮೈಸೂರು: ಸಾಧು, ಸಂತರು, ಶರಣರ, ಮಹಾತ್ಮರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ ನಿತ್ಯದ ಬದುಕಿಗೆ ಮಾರ್ಗದರ್ಶಿ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮರ ದಾರಿ, ನುಡಿದ ಮಾತು, ನೀಡಿದ ಸಂದೇಶ ನಮಗೆ ಮಾದರಿ ಆಗಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾನುಭಾವರು ಸಮಾಜದ ಅಂಕು-ಡೊಂಕುಗಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ.
ಬೋವಿ ಜನಾಂಗದವರು ಅವರ ಕುಲಕಸುಬಿಗೆ ಮಾತ್ರ ಸೀಮಿತವಾಗಿರದೆ ಉನ್ನತ ವಿದ್ಯಾಭ್ಯಾಸ ಮಾಡಿ, ಉತ್ತಮ ಸ್ಥಾನ ಪಡೆದು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಸವಣ್ಣನವರ ಸಮಕಾಲೀನರಾದ ಶಿವಯೋಗಿ ಸಿದ್ಧರಾಮೇಶ್ವರರು ಸಾಮಾಜಿಕ ಶಿಕ್ಷಣಕ್ಕೆ, ಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಅವರ ಆಚಾರ- ವಿಚಾರಗಳನ್ನು ಜೀವನದಲ್ಲಿ ಪಾಲಿಸಿ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಸಮಾನತೆಯನ್ನು ಹೋಗಲಾಡಿಸಿ ಸಮಸಮಾಜದ ಕಲ್ಪನೆಯ ಸಮಾನತೆ, ಸಹಬಾಳ್ವೆಯ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು. ಸಿದ್ಧರಾಮೇಶ್ವರರ ನೂರಾರು ತತ್ವಗಳನ್ನು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಜನವಾಣಿಯನ್ನು ದೇವವಾಣಿಯಾಗಿ ಮಾಡಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. ಸಿದ್ಧರಾಮೇಶ್ವರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
12ನೇ ಶತಮಾನದಲ್ಲಿ ಅಲ್ಲಮಪ್ರಭು, ಬಸವಣ್ಣನ ಕಾಲದಲ್ಲಿ ವಚನ ಸಾಹಿತ್ಯದಲ್ಲಿ ಒಂದು ಕ್ರಾಂತಿಯ ಅಲೆಯನ್ನು ಸೃಷ್ಟಿಸದಂತಹವರಲ್ಲಿ ಸಿದ್ಧರಾಮೇಶ್ವರರೂ ಒಬ್ಬರು. 12 ನೇ ಶತಮಾನದಲ್ಲಿನ 1,679 ವಚನಗಳು ಲಭ್ಯವಾಗಿವೆ. ಎಲ್ಲ ವಚನಗಳಲ್ಲಿಯೂ ಸಾಮಾಜಿಕ ಕ್ರಾಂತಿ, ಸಂವೇದನೆ, ಕಳಕಳಿ, ಸಂಯಮ, ಆಧ್ಯಾತ್ಮಿಕದ ಒಲವು ಇದೆ ಎಂದರು.
ಶ್ರೀ ಶಿವಯೋಗಿ ಸಿದ್ಧ್ದರಾಮೇಶ್ವರ ಭೋವಿ ಸಮಾಜದ ಹಿತರಕ್ಷಣಾ ಅಧ್ಯಕ್ಷ ನಾಗರಾಜು ಮಾತನಾಡಿ, ಭೋವಿ ಸಮಾಜದಿಂದ ಶಾಲಾ, ಕಾಲೇಜು, ಮತ್ತು ವಸತಿನಿಲಯ ಸೌಲಭ್ಯವನ್ನು ಕಲ್ಪಿಸುವ ಯೋಜನೆ ಇದೆ. ಅದಕ್ಕೆ ಭೋವಿ ಸಮಾಜದ ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಸಹಕರಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸವಿತಾ, ನಗರ ಪಾಲಿಕೆ ಉಪ ಆಯುಕ್ತ ಸೋಮಶೇಖರ್, ಮುಖಂಡರಾದ ಪಿ.ಎ.ಚಿನ್ನಸ್ವಾಮಿ, ಜಿ.ವಿ ಸೀತಾರಾಮ್ ಇತರರಿದ್ದರು.