

ಕೆ.ಆರ್.ನಗರ: ಹಿರಿಯ ನಾಗರಿಕರು ಸದಾ ಚಟುವಟಿಕೆಯಿಂದ ಇರಬೇಕು, ಸಕಾಲದಲ್ಲಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ತೆಗೆದುಕೊಳ್ಳಬೇಕು, ಆಗ ಮಾತ್ರ ಹೆಚ್ಚು ಕಾಲ ಬದುಕುವುದರ ಜತೆಗೆ ಆರೋಗ್ಯವಂತರಾಗಿರಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೃದ್ಧರು ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡು ಮಿತ ಆಹಾರ ಸೇವನೆ ಮಾಡಿ ಆರೋಗ್ಯವಂತರಾಗಿರಬೇಕು ಎಂದು ಸಲಹೆ ನೀಡಿದರು.
ಹೃದಯ ಸಂಬಂಧಿ, ರಕ್ತದೊತ್ತಡ ಮತ್ತು ಮಧುಮೇಹ ಇರುವವರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು ಮತ್ತು ಮಾನಸಿಕವಾಗಿ ಚಿಂತಿಸಬಾರದು. ಚಿಕಿತ್ಸೆ ಪಡೆಯುವ ಸಲುವಾಗಿ ಒಂದಷ್ಟು ಹಣವನ್ನು ಸಂಪಾದಿಸುವ ಸಮಯದಲ್ಲಿ ಉಳಿತಾಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ಮಾತನಾಡಿ, ಸರ್ಕಾರಗಳ ಯೋಜನೆಗಳು, ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಕ್ರಮದಿಂದಾಗಿ ನಾಗರಿಕರಲ್ಲಿ ಸರಾಸರಿ ಆಯಸ್ಸು ಹೆಚ್ಚಾಗುತ್ತಿದ್ದು 75 ಕೋಟಿ ಹಿರಿಯ ನಾಗರಿಕರು ಇದ್ದಾರೆ. ಮುಂದೆ ಇದು 150 ಕೋಟಿ ಆಗಲಿದೆಯೆಂದು ಅಂದಾಜಿಸಲಾಗಿದೆ. ವೃದ್ಧರಿಗೆ ಮಾನಸಿಕ, ಆರ್ಥಿಕ ಮತ್ತು ಒಳ್ಳೆಯ ಆರೋಗ್ಯದ ಬೆಂಬಲ ಬೇಕಾಗಿದೆ ಆದ್ದರಿಂದ ಶಾಲೆಗಳಲ್ಲಿ ಮಕ್ಕಳಿಗೆ ಹಿರಿಯರನ್ನು ಮತ್ತು ವೃದ್ಧರನ್ನು ಮನೆಯಲ್ಲಿ ಗೌರವಿಸಿ ಆರೈಕೆ ಮಾಡುವುದನ್ನು ಬೋಧಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎಸ್‌ಟಿಇಎಂಐ ಪುನೀತ್ ರಾಜ್‌ಕುಮಾರ್ ಹೃದಯ ಭಾಗ್ಯ ಯೋಜನೆ ತಂದಿದ್ದು ಇದರಲ್ಲಿ ಯಾವುದೇ ವ್ಯಕ್ತಿ ಎದೆ ನೋವೆಂದು ಆಸ್ಪತ್ರೆಗೆ ಬಂದರೆ ಅವರಿಗೆ ತೆಗೆಯುವ ಇಸಿಜಿ, ಜಯದೇವ ಹೃದ್ರೋಗ ಸಂಸ್ಥೆಯಲ್ಲಿರುವ ಹಬ್ ಸೆಂಟರ್‌ಗೆ ಹೋಗುತ್ತದೆ. ಅಲ್ಲಿ ಇಸಿಜಿಯನ್ನು ಹೃದ್ರೋಗ ತಜ್ಞರು ವಿಮರ್ಶಿಸಿ ಹೃದಯಾಘಾತ ಆಗಿದೆಯೇ ಇಲ್ಲವೆ ಎಂದು ತಾಲೂಕು ವೈದ್ಯರಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್, ಅಸಾಂಕ್ರಾಮಿಕ ರೋಗಗಳ ವಿಭಾಗದ ಡಾ.ಮಂಜುನಾಥ್, ಡಾ.ಕಿಶೋರ್, ಡಾ.ಶಿವಮಲ್ಲೇಶ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಣ್ಣಲಿಂಗಪ್ಪ ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಿ.ಜೆ.ನವೀನ್, ಹಿರಿಯ ನಾಗರಿಕರಾದ ತಿಮ್ಮಶೆಟ್ಟಿ, ರಾಮಕೃಷ್ಣ, ವ್ಯಾನ್ ಸುರೇಶ್, ಆರೋಗ್ಯ ಇಲಾಖೆ ಸಿಬ್ಬಂದಿ ಕೆ.ವಿ.ರಮೇಶ್, ಸಿ.ಎಂ.ರೇಖಾ, ಮಹೇಶ್ ಇತರರು ಇದ್ದರು.