ವೈಜ್ಞಾನಿಕ ಚಿಂತನೆ ವಿದ್ಯಾರ್ಥಿಗಳ ಜೀವನದ ಭಾಗವಾಗಲಿ

ಹುಣಸೂರು ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಪಾಲಕರ ಗಮನ ಸೆಳೆಯಿತು.
ಹುಣಸೂರು ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಪಾಲಕರ ಗಮನ ಸೆಳೆಯಿತು.
Published on

ಹುಣಸೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆಗಳು ನಿತ್ಯ ಜೀವನದ ಭಾಗವಾಗಬೇಕು ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಸಿ.ನಂದ ಅಭಿಪ್ರಾಯಪಟ್ಟರು.

ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೈಜ್ಙಾನಿಕ ಮನೋಭಾವನೆ ಎನ್ನುವುದು ವಿಜ್ಞಾನದ ವಿಷಯವನ್ನು ಮಾತನಾಡುವಾಗ ಮಾತ್ರವಾಗಿರಬಾರದು. ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ರೂಪಿಸಿಕೊಳ್ಳಬೇಕು. ಏನು, ಹೇಗೆ, ಯಾಕೆ ಎಂಬಿತ್ಯಾದಿ ಪ್ರಶ್ನೆಗಳು ಮನದಲ್ಲಿ ಮೂಡಬೇಕು. ವಿಜ್ಞಾನ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಹೊಸವಿಚಾರಗಳ ಅರಿವು, ಹೊಸ ಆಲೋಚನೆ, ಸಂಶೋಧನಾ ಮನೋಭಾವ ಮೂಡಿಸುವಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಹಾಗೂ ಸಾಮರ್ಥ್ಯವನ್ನು ಬೆಳೆಸುವಲ್ಲಿ ಸಹಾಯಕವಾಗುತ್ತದೆ ಎಂದರು.

ವಿದ್ಯಾಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ನವೀನ್ ರೈ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ವಿಜ್ಞಾನವನ್ನು ಇಷ್ಟಪಟ್ಟು ಜ್ಞಾನ ಪಡೆದಲ್ಲಿ ಮಾತ್ರ ದೇಶದ ಬೆಳವಣಿಗೆಗೆ ನೆರವಾಗಲು ಸಾಧ್ಯ. ಅದರಲ್ಲೂ ಹೆಣ್ಣು ಮಕ್ಕಳು ಈ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಿಜ್ಞಾನ ಪ್ರದರ್ಶನದಲ್ಲಿ 8ನೇ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. 55 ವೈಜ್ಞಾನಿಕ ಮಾದರಿಗಳು ಪ್ರದರ್ಶಿಸಲ್ಪಟ್ಟಿದ್ದವು. ಪರಿಸರ ಸಂರಕ್ಷಣೆ, ನವೀಕರಿಸಬಹುದಾದ ಶಕ್ತಿ, ಸೌರಶಕ್ತಿ ಉಪಕರಣಗಳು, ಪ್ಲಾಸ್ಟಿಕ್ ಮರುಬಳಕೆಯ ತಂತ್ರಗಳು, ಕೃಷಿಯಲ್ಲಿ ಯಂತ್ರಗಳ ಬಳಕೆ ಹಾಗೂ ರೋಬಾಟಿಕ್ಸ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಹೊಸ ಆವಿಷ್ಕಾರಗಳು ಪ್ರಮುಖ ಆಕರ್ಷಣೆಯಾಗಿದ್ದವು. ವಿದ್ಯಾರ್ಥಿ ಆದಿತ್ಯ ಮತ್ತು ಮೋಹನ್ ಪ್ರದರ್ಶಿಸಿದ ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ ಎಲ್ಲರ ಗಮನ ಸೆಳೆಯಿತು. ಇದೇ ವೇಳೆ 9ನೇ ತರಗತಿ ವಿದ್ಯಾರ್ಥಿನಿ ಫಾರಿಯ ಬಾನು ತಯಾರಿಸಿದ ನ್ಯೂಕ್ಲಿಯರ್ ಪವರ್ ಪಾಯಿಂಟ್ ಮಾದರಿಗೆ ಪ್ರಶಂಸೆ ದೊರಕಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಕೃಷ್ಣಮೂರ್ತಿ, ಆರ್.ಎನ್.ಮಂಜುನಾಥ್, ವಾಸು ಅಗಸ್ತ್ಯ ಫೌಂಡೇಷನ್, ಪ್ರಾಂಶುಪಾಲ ಎಂ.ಟಿ.ಮಂಜುನಾಥ್, ಗುಲ್ನ್‌ಜ್ ಖಾನಂ, ಉಪಮುಖ್ಯ ಶಿಕ್ಷಕಿ ಎಸ್.ಎನ್. ಶಶಿಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net