

ಮುಂಡರಗಿ: ಎಸ್ಸಿ, ಎಸ್ಟಿಗೆ ಮೀಸಲಿರುವ ಅನುದಾನವನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ವಿನಿಯೋಗ ಮಾಡಬೇಕು. ಯಾವುದೇ ರೀತಿ ತೊಂದರೆಯಾಗದಂತೆ ನಿಯಮಬದ್ಧವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಾಪಂ ಇಒ ಎಸ್.ಎಸ್. ಕಲ್ಮನಿ ಸೂಚಿಸಿದರು.
ಪಟ್ಟಣದ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಮೇಲ್ವಿಚಾರಣೆ ಸಮಿತಿಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಡರಗಿ, ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಇದುವರೆಗೆ ಒಟ್ಟು 5,094 ರೈತರಿಗೆ ವಿವಿಧ ಬಗೆಯ ಬಿತ್ತನೆ ಬೀಜ ವಿತರಿಸಲಾಗಿದೆ. ಇದರಲ್ಲಿ 3,424 ಸಾಮಾನ್ಯ ರೈತರಿಗೆ 437 ಕ್ವಿಂಟಾಲ್ ಬಿತ್ತನೆ ಬೀಜ, 1,214 ಎಸ್ಸಿ ರೈತರಿಗೆ 161ಕ್ವಿಂಟಾಲ್ ಬಿತ್ತನೆ ಬೀಜ, 456 ಎಸ್ಟಿ ರೈತರಿಗೆ 57 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ಟಿ.ಎಸ್. ಮಾಹಿತಿ ನೀಡಿದರು. ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಸಿದ ರೈತರಿಗೆ ರಸೀದಿ ನೀಡುತ್ತಿಲ್ಲ ಎನ್ನುವ ದೂರ ಕೇಳಿ ಬಂದಿದೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಇಒ ಕಲ್ಮನಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ಆಯಾ ಇಲಾಖೆ ಅಧಿಕಾರಿಗಳು ಎಸ್ಸಿ, ಎಸ್ಟಿ ಜನಾಂಗಕ್ಕೆ ಮೀಸಲಿರಿಸಿದ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು. ಇಲ್ಲವಾದರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಸಾಲಿನಲ್ಲಿ ರಾಜ್ಯ ಹಾಗೂ ಕೇಂದ್ರ ವಲಯದಿಂದ ಎಸ್ಸಿ, ಎಸ್ಟಿ ಯೋಜನೆಗಳ ಕ್ರಿಯಾಯೋಜನೆ ಅನುಮೋದನೆ ಆಗಿಲ್ಲ. ಸದ್ಯ ತಾ.ಪಂ.ನ ಪರಿಶಿಷ್ಟ ಪಂಗಡ ಯೋಜನೆಯಡಿ 40 ಸಾವಿರ ರೂ. ಗುರಿ ನಿಗದಿಪಡಿಸಿದ್ದು, ಅನುದಾನ ಬಿಡುಗಡೆ ನಂತರ ಇಬ್ಬರು ಪರಿಶಿಷ್ಟ ಪಂಗಡ ರೈತ ಫಲಾನುಭವಿಗಳಿಗೆ ತೆಂಗಿನ ತೋಟ ನಿರ್ವಿುಸಲಾಗುವುದು ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವೈ.ಎಚ್. ಜಾಲವಾಡಗಿ ಹೇಳಿದರು. ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಗಳ ಪ್ರಗತಿ ಕುರಿತು ಮಾಹಿತಿ ನೀಡಿದರು.
ವಿಜಯವಾಣಿ ವರದಿ ಪ್ರಸ್ತಾಪ
ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಶಿಥಿಲಗೊಂಡ ಸಮುದಾಯ ಭವನ ಕುರಿತು ಜೂ. 26ರಂದು ‘ವಿಜಯವಾಣಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ ಪ್ರಸ್ತಾಪಿಸಿದ ತಾ.ಪಂ. ಇಒ ಎಸ್.ಎಸ್. ಕಲ್ಮನಿ, 10 ದಿನಗಳ ಹಿಂದೆ ಶಿಥಿಲಗೊಂಡ ಸಮುದಾಯ ಭವನವನ್ನು ನೆಲಸಮಗೊಳಿಸಲುತಿಳಿಸಿದ್ದೇವೆ. ಸದ್ಯ ಸಾರ್ವಜನಿಕರು ಒಳಗಡೆ ಹೋಗದಂತೆ ಸುತ್ತಲೂ ಜಾಲಿಕಂಟಿ ಹಾಕಲಾಗಿದೆ. ಅಲ್ಲಿ ಏನಾದರೂ ಅನಾಹುತವಾದರೆ ನೀವೇ ಹೋಣೆ. ನಾಳೆಯೇ ಸ್ಥಳಕ್ಕೆ ಭೇಟಿ ನೀಡಿ ನೆಲಸಮಗೊಳಿಸುವ ಕೆಲಸ ಮಾಡಬೇಕು ಎಂದು ಜಿ.ಪಂ. ಎಇಇ ನಾಗರತ್ನಾ ಟಿ. ಅವರಿಗೆ ತಿಳಿಸಿದರು. ಬೆಣ್ಣಿಹಳ್ಳಿಯಲ್ಲಿ ನೂತನ ಸಮುದಾಯ ಭವನ ನಿರ್ವಣಕ್ಕೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ಇಒ ಕಲ್ಮನಿ ತಿಳಿಸಿದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುಮಾರು 25 ವಿವಿಧ ಇಲಾಖೆ ಅಧಿಕಾರಿಗಳ ಪೈಕಿ 12ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಗೈರಾದ ಅಧಿಕಾರಿಗಳಿಗೆ ಮತ್ತು ತಮ್ಮ ಪರ ಬೇರೆ ಸಿಬ್ಬಂದಿ ಕಳುಹಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಕಡ್ಡಾಯವಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಬೇಕು ಎಂದು ತಾ.ಪಂ. ಇಒ ಎಸ್.ಎಸ್. ಕಲ್ಮನಿ ಸೂಚಿಸಿದರು.
*