ಸತೀಶ ಸೈಲ್ ಶಾಸಕತ್ವ ರದ್ದುಪಡಿಸಲಿ

SIRSI N.S. HEGDE
Published on

ಶಿರಸಿ: ಅಂಕೋಲಾದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಅವರನ್ನು ಅಪರಾಧಿ ಎಂದು ಪರಿಗಣಿಸಿ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಸತೀಶ ಸೈಲ್ ಅವರ ಶಾಸಕತ್ವವನ್ನು ರದ್ದುಪಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 3,100 ಮೆಟ್ರಿಕ್ ಟನ್ ಅದಿರು ಕಳ್ಳಸಾಗಾಣಿಕೆಯಲ್ಲಿ ಕಾಂಗ್ರೆಸ್ ಶಾಸಕ ಸತೀಶ ಸೈಲ್ ದೋಷಿ ಆಗಿರುವುದು ದೃಢಪಟ್ಟಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಇಂತಹ ಗುರುತರ ಪ್ರಮಾದ ಎಸಗಿರುವ ವ್ಯಕ್ತಿ ಶಾಸಕ ಸ್ಥಾನದಲ್ಲಿ ಮುಂದುವರಿಯಬಾರದು. ಕಾಂಗ್ರೆಸ್ ಎಂದಿನಂತೆ ತನ್ನ ಭ್ರಷ್ಟ ಶಾಸಕರ ಬೆಂಗಾವಲಾಗಿ ನಿಲ್ಲುವ ಧೋರಣೆ ಅನುಸರಿಸುತ್ತಿದೆ. ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಎಂಬುದನ್ನೇ ನೆಪ ಮಾಡಿಕೊಂಡು ಅಪರಾಧಿ ಶಾಸಕರು ಜವಾಬ್ದಾರಿಯಲ್ಲಿ ಮುಂದುವರಿಯುವುದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುವುದು ಕ್ಷೇತ್ರದ ಜನತೆಗೆ ಮಾಡುವ ದ್ರೋಹವಾಗುತ್ತದೆ ಎಂದಿದ್ದಾರೆ.

ಕರ್ನಾಟಕ ಸರ್ಕಾರ ಮತ್ತು ವಿಧಾನ ಸಭಾಧ್ಯಕ್ಷರು ಈ ಕೂಡಲೇ ಅಪರಾಧಿ ಶಾಸಕರನ್ನು ಅನರ್ಹಗೊಳಿಸಬೇಕು. ಎರಡು ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ಶಿಕ್ಷೆಗೆ ಒಳಗಾಗುವ ಶಾಸಕರ ಸ್ಥಾನ ರದ್ದು ಆಗಬೇಕಾಗಿರುವುದರಿಂದ ತಕ್ಷಣ ವಿಧಾನ ಸಭಾಧ್ಯಕ್ಷರು, ಶಾಸಕ ಸತೀಶ ಸೈಲ್ ಅವರ ವಜಾ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net