

ಮೈಸೂರು: ಸಾಹಿತ್ಯ ದಾಸೋಹವನ್ನು ಬಡಿಸುವ ಕೆಲಸ ನಿರಂತರವಾಗಿ ನಡೆಯುವ ಅಗತ್ಯವಿದೆ. ಇದರಿಂದ ಸಾಹಿತ್ಯ ಸಂಸ್ಕಾರ ಸಾಧ್ಯವಾಗುತ್ತದೆ ಎಂದು ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ರಘುಪತಿ ತಾಮ್ಹನ್‌ಕರ್ ಸಲಹೆ ನೀಡಿದರು.
ಮೈಸೂರು ಸಾಹಿತ್ಯ ದಾಸೋಹವು 102ನೇ ಮಾಲಿಕೆ ಅಂಗವಾಗಿ ಮೇಲುಕೋಟೆಯ ವಲ್ಲವೀ ಧಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಹಿತ್ಯ ಸಮ್ಮಿಲನದಲ್ಲಿ ಅವರು ಮಾತನಾಡಿದರು.
ಸಾಹಿತ್ಯ ದಾಸೋಹಗಳನ್ನು ನಿರಂತರವಾಗಿ ನಡೆಸಿ 102 ಸಾಹಿತ್ಯ ದಾಸೋಹ ಮಾಲಿಕೆಗೆ ಕಾರಣರಾದ ಮೈಸೂರು ಸಾಹಿತ್ಯ ದಾಸೋಹದ ಸ್ಥಾಪಕ ಟಿ.ಆರ್. ಆನಂದ್ ಹಾಗೂ ಇವರಿಗೆ ಹೆಗಲು ಕೊಡುತ್ತಿರುವ ಸವಿಗನ್ನಡ ಪತ್ರಿಕೆಯ ರಂಗನಾಥ್ ಅವರ ಕಾರ್ಯ ಶ್ಲಾಘನೀಯ ಎಂದರು.
ಚುಟುಕು ಕವಿ, ವಿಜ್ಞಾನ ಲೇಖಕ ರಾಮ್‌ಪ್ರಸಾದ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಹೊನ್ನಾವರದ ಗಜಾನನ ಹೆಗಡೆ ಬೆಳಕಿನ ಬಗ್ಗೆ ಮಾತನಾಡಿದರು. ಪದ್ಮಿನಿ ಹೆಗಡೆ ಅವರು ಅಕ್ಕಮಹಾದೇವಿಯ ವಚನದ ಬಗ್ಗೆ ತಿಳಿಸಿದರು. ಉಮಾ ರಮೇಶ್ ತಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು.
ಟಿವಿ ಧಾರಾವಾಹಿಗಳಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ಅನುಪಮಾ ಅರುಳಿಕೆ, ಮುಕ್ತಕ ಕವಯಿತ್ರಿ ಕೆ. ಟಿ. ಶ್ರೀಮತಿ ತಮ್ಮ ಕವನಗಳನ್ನು ವಾಚಿಸಿದರು.
ಹಾಸನದ ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್ ಅಶ್ವತ್ಥ್ ನಾರಾಯಣ್, ರಾಮಾಯಣದ ಬಗ್ಗೆ ವ್ಯಾಖ್ಯಾನಿಸಿದರು. ಅಣಕವಾಡುಗಳ ಕವಿ ಎಸ್.ರಾಜಗೋಪಾಲಾಚಾರಿ ನೀರಿಲ್ಲ ನೀರಿಲ್ಲ ಎಂಬ ಅಣಕು ಗೀತೆಯನ್ನು ಪ್ರಸ್ತುತಪಡಿಸಿದರು.
ಸಂಸ್ಕೃತ ಪ್ರಾಧ್ಯಾಪಕ ಎಸ್.ಎನ್.ಸಿಂಹ ಮೇಲುಕೋಟೆ ಬೌದ್ಧ ಧರ್ಮದ ವಿಚಾರಗಳ ಕುರಿತು ಮಾತನಾಡಿದರು. ಲೇಖಕಿ ನಾಗರತ್ನ ಹೆಮ್ಮಿಗೆ ಇತರರು ಇದ್ದರು. 32ಕ್ಕೂ ಹೆಚ್ಚು ಲೇಖಕರು ಬೆಂಗಳೂರು, ಮಂಡ್ಯ, ಮೈಸೂರು, ಹಾಸನದಿಂದ ಬಂದು ಕಥೆ, ಕವನ, ಹೈಕುಗಳನ್ನು ಪ್ರಸ್ತುತಪಡಿಸಿದರು.