

ರೋಣ: ಮನಸಿನ ಭಾವನೆಗಳು ಆಗಾಗ ಬದಲಾಗುತ್ತಿದ್ದರೆ ಅದು ಮಾನಸಿಕ ಆರೋಗ್ಯದ ಲಕ್ಷಣವಾಗಿರಬಹುದು. ಮಾನಸಿಕ ಕಾಯಿಲೆ ಕಂಡು ಹಿಡಿಯಲು ಯಾವುದೇ ಪರಿಕರಗಳಿಲ್ಲ. ಪ್ರತಿಯೊಬ್ಬರೂ ನಿವೃತ್ತಿ ಬಳಿಕ ಸಾಂಘಿಕ ಚಟುವಟಿಕೆಯಲ್ಲಿ ತೊಡಗಿಕೊಂಡು ಮಾನಸಿಕ ಒತ್ತಡದಿಂದ ದೂರವಿದ್ದು ಆರೋಗ್ಯದಿಂದ ಬದುಕಬೇಕು ಎಂದು ಧಾರವಾಡದ ನಿಮ್ಹಾನ್ಸ್ ವೈದ್ಯ ರಾಘವೇಂದ್ರ ನಾಯಕ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು. ‘ಇಳಿವಯಸಿನಲ್ಲಿ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು. ಮಾನಸಿಕ ರೋಗಗಳಿಗೆ ಮಕ್ಕಳು, ವೃದ್ಧರು, ಸಿರಿವಂತ, ಬಡವ ಎಂಬ ಯಾವುದೇ ಭೇದವಿಲ್ಲ. ಎಲ್ಲ ವಯೋಮಾನದ ಎಲ್ಲ ವರ್ಗದ ಜನರಲ್ಲಿಯೂ ಮಾನಸಿಕ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರಬಹುದು. ಮಾನಸಿಕ ಆರೋಗ್ಯ ಚಿಕಿತ್ಸಾ ಪ್ರಕ್ರಿಯೆಗಳಲ್ಲಿ 1956ಕ್ಕೂ ಮೊದಲು ಕೇವಲ ಶಾಕ್ ಟ್ರೀಟ್ವೆುಂಟ್ ಮಾತ್ರ ಅಸ್ತಿತ್ವದಲ್ಲಿತ್ತು. ಆದರೆ, ಪ್ರಸ್ತುತ ಸಾಕಷ್ಟು ಔಷಧಗಳು ಲಭ್ಯವಿದೆ. ಪ್ರತಿ ಜಿಲ್ಲೆ ತಾಲೂಕುಗಳಲ್ಲಿಯೂ ಇಂದು ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮನೋವೈದ್ಯರ ಸೇವೆ ಒದಗಿಸುತ್ತಿದ್ದು, ಅವಶ್ಯವಿದ್ದವರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ದಂತ ವೈದ್ಯೆ ಅಂಬಿಕಾ ನಾಯಕ, ಸರ್ಕಾರಿ ನಿವೃತ್ತ ನೌಕರರ ಸಂಘದ ರೋಣ ತಾಲೂಕು ಘಟಕದ ಅಧ್ಯಕ್ಷ ಎ.ಎಸ್. ಖತೀಬ, ಗೌರವಾಧ್ಯಕ್ಷ ಎಲ್.ಎಸ್. ಹಂಚಿನಾಳ, ಉಪಾಧ್ಯಕ್ಷ ಸಿ.ಎಚ್. ನಾಯಕ, ಪದಾಧಿಕಾರಿಗಳಾದ ಆರ್.ವೈ. ಮುರಕಿ, ಎಸ್.ಸಿ. ರಾಟಿಮನಿ, ವಿ.ಕೆ. ಪಾಟೀಲ, ಕೆ.ಎಸ್. ಬಾರಕೇರ, ಎಲ್.ಎಸ್. ತಳವಾರ, ಸಿ.ಬಿ. ರಡ್ಡೇರ, ಮಹದೇವಪ್ಪ ಹಾದಿಮನಿ, ರೆಹಮಾನಸಾಬ್ ಹೊಸಮನಿ, ಇತರರಿದ್ದರು.