ಸಂಶೋಧನೆ ಸಮಾಜಕ್ಕೆ ಉಪಯೋಗವಾಗಲಿ: ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಆಶಯ

mysore
Published on

ಮೈಸೂರು: ಪಿಎಚ್.ಡಿ ಸಂಶೋಧನೆಯ ಫಲಿತಾಂಶವು ಸಮಾಜದ ಪ್ರಯೋಜನಕ್ಕೆ ಬರಬೇಕು. ಆಗಲೇ ಅದಕ್ಕೆ ಸಾರ್ಥಕತೆ ಬರುತ್ತದೆ ಎಂದು ಚಿಕ್ಕಮಗಳೂರಿನ ಉಪನ್ಯಾಸಕ, ವಿಮರ್ಶಕ ಡಾ.ಎಚ್.ಎಸ್. ಸತ್ಯನಾರಾಯಣ ಹೇಳಿದರು.


ಅರಿವು ಸಂಶೋಧನಾ ವಿದ್ಯಾರ್ಥಿ ವೇದಿಕೆ ವತಿಯಿಂದ ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಬಂಧ ಮಂಡನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಶೋಧನೆಯ ಫಲಿತಾಂಶ ಭವಿಷ್ಯದಲ್ಲೂ ಉಳಿಯಬೇಕು. ಆಗಲೇ ಅದಕ್ಕೆ ಒಂದು ಮೌಲ್ಯ ಬರುತ್ತದೆ ಎಂದರು.


ಸಂಶೋಧನೆಗೆ ನ್ಯಾಯ ನೀಡದೆ ಹೋದರೆ ಅದಕ್ಕೆ ಅಪಚಾರ ಎಸಗಿದಂತಾಗುತ್ತದೆ. ಜತೆಗೆ ಯಾರೋ ಹೇಳಿದ ಮಾತನ್ನು ನನ್ನದೂ ಎಂದು ಹೇಳಿಕೊಳ್ಳುವುದು ಸಂಶೋಧನೆಗೆ ಎಸಗುತ್ತಿರುವ ಪ್ರಮಾದವೂ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಕರ್ವಾಲೋ ಕಾದಂಬರಿ ಪಾಠ ಮಾಡುವುದು ಕಷ್ಟ ಎಂದು ಮೇಷ್ಟ್ರುಗಳು ಹೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ್ದ ಪೂರ್ಣಚಂದ್ರ ತೇಜಸ್ವಿ ಅವರು, ‘ಪಾಠ ಮಾಡುವ ಅವರು ಹಾರುವ ಓತಿಕ್ಯಾತದ ಬಗ್ಗೆ ಇನ್ನಿಲ್ಲದ ತಪ್ಪು ವಿಶ್ಲೇಷಣೆಯನ್ನು ಮಾಡಿ ಕಾದಂಬರಿಯ ವಾಸ್ತವ ಹಾಳುಗೆಡವುತ್ತಿದ್ದಾರೆ. ಕಾದಂಬರಿಯನ್ನು ಅದರ ವಾಸ್ತವ ನೆಲೆಯಲ್ಲಿ ಕಂಡರೆ ಅಷ್ಟೇ ಸಾಕು’ ಎಂದು ಹೇಳಿದ್ದರು. ಪರಿಸರಕ್ಕೆ ಯಾವ ಭ್ರಮೆಯೂ ಇಲ್ಲ. ಭ್ರಮೆ ಬಿಟ್ಟು ಕಾದಂಬರಿ ಪಾಠ ಮಾಡಿ ಎಂದು ತೇಜಸ್ವಿ ಹೇಳಿದ್ದರು ಎಂದು ಸ್ಮರಿಸಿಕೊಂಡರು.


ಮೈವಿವಿ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಮಾತನಾಡಿ, ಸಾಹಿತ್ಯ ಓದಿಗೆ ಸೀಮಿತವಾಗಬಾರದು. ನಡೆ-ನುಡಿಯಲ್ಲೂ ಇರಬೇಕು. ಇಡೀ ಮಾನಸಗಂಗೋತ್ರಿಯಲ್ಲಿ ಪ್ಲಾಸ್ಟಿಕ್‌ಮುಕ್ತ ವಾತಾವರಣ ಸೃಷ್ಟಿ ಮಾಡಲು ವಿವಿ ಪಣ ತೊಟ್ಟಿದ್ದು, ಯಾರೂ ಕ್ಯಾಂಪಸ್‌ನಲ್ಲಿ ಪ್ಲಾಸ್ಟಿಕ್ ಅನ್ನು ಯಾವ ಕಾರ್ಯಕ್ರಮದಲ್ಲೂ ಯಾವ ರೂಪದಲ್ಲೂ ಬಳಸಬಾರದು. ಈ ಕುರಿತು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.


ಸಂಶೋಧನಾ ವಿದ್ಯಾರ್ಥಿ ಕೆ.ಕೆ. ಶೇಖರ್, ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿಯಲ್ಲಿ ಜೀವವೈವಿಧ್ಯ ಹಾಗೂ ಸಂಶೋಧನಾ ವಿದ್ಯಾರ್ಥಿನಿ ಶ್ವೇತಾ ಅವರು, ಡಿ.ಎಸ್.ಕೃಷ್ಣಮೂರ್ತಿ ಅವರ ರಾಜಯೋಗಿ(ಅಧುನಿಕ ವಚನಗಳು) ಕೃತಿಯ ವಿಶ್ಲೇಷಣೆ ಎಂಬ ವಿಷಯ ಮಂಡಿಸಿದರು.


ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಕನ್ನಡ ಪ್ರಾಧ್ಯಾಪಕಿ ಎಸ್.ಡಿ.ಶಶಿಕಲಾ ಮಾತನಾಡಿದರು. ವೇದಿಕೆಯ ಸಂಚಾಲಕಿ ಶೈಲಾಜಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net