ಸಂಶೋಧನೆ ಆಧಾರಿತ ಚಿಂತನೆ ಮೂಡಲಿ

Kmt science
Published on

ಕುಮಟಾ: ಸಂಶೋಧನೆ ಆಧಾರಿತ ಚಿಂತನೆಗಳು ಯುವ ಮನಸ್ಸಿನಲ್ಲಿ ನಿರಂತರವಾಗಿ ಮೂಡಬೇಕು. ಅದರಿಂದ ಮುಂದಿನ ಐವತ್ತು ವರ್ಷಗಳಲ್ಲಿ ಹೊಸ ಹೊಸ ಆವಿಷ್ಕಾರಗಳಾಗಿ ವಿಶ್ವದಲ್ಲಿ ಭಾರತ ಪ್ರಕಾಶಿಸಬೇಕು ಎಂದು ವಿಜ್ಞಾನಿ ಅಶೋಕ ಪ್ರಭು ಆಶಯ ವ್ಯಕ್ತಪಡಿಸಿದರು.

ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೊಸ ಸಂಶೋಧನೆಗಳು, ತಂತ್ರಜ್ಞಾನದ ಮೂಲಕ ವಿಶ್ವವು ಬೆಳವಣಿಗೆ ಹೊಂದಿದೆ. ಭಾರತದಲ್ಲಿ ಹಣಕಾಸು ಕ್ಷೇತ್ರದ ಡಿಜಿಟಲೀಕರಣ ಇದಕ್ಕೊಂದು ಉತ್ತಮ ಉದಾಹರಣೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಂಶೋಧನಾತ್ಮಕ ಚಿಂತನೆಗಳು, ಆವಿಷ್ಕಾರಗಳ ಮುಖಾಂತರ ಸಮಾಜದಲ್ಲಿ ಅಥವಾ ಪರಿಸರದಲ್ಲಿ ಇರುವಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಕೊಂಕಣ ಎಜುಕೇಶನ್ ಟ್ರಸ್ಟ್ ಗೌರವ ಕಾರ್ಯದರ್ಶಿ ಮುರುಳಿಧರ ಪ್ರಭು ಮಾತನಾಡಿ, ಮೂಲತಃ ತಾಲೂಕಿನ ಕಡ್ನೀರು ಗ್ರಾಮದವರಾಗಿ ಉನ್ನತ ವ್ಯಾಸಂಗ ಮಾಡಿ ಅಮೇರಿಕದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಡಾ. ಅಶೋಕ ಪ್ರಭು ಇಳಿ ವಯಸ್ಸಿನಲ್ಲೂ ಹುಮ್ಮಸ್ಸು, ಉತ್ಸಾಹ, ಜೀವನಶೈಲಿ, ಸಂಶೋಧನಾತ್ಮಕ ಚಿಂತನೆಗಳು ಎಲ್ಲರಿಗೂ ಸ್ಫ್ಪೂರ್ತಿಯಾಗಿದೆ ಎಂದರು.

ಪ್ರಾಂಶುಪಾಲ ಕಿರಣ ಭಟ್ಟ ಸ್ವಾಗತಿಸಿದರು. ಉಪನ್ಯಾಸಕ ಪದ್ಮನಾಭ ಪ್ರಭು ವಂದಿಸಿದರು. ಕೊಂಕಣ ಎಜುಕೇಶನ್ ಟ್ರಸ್ಟ್ ನ ವಿಶ್ವಸ್ಥರಾದ ಡಿ.ಡಿ. ಕಾಮತ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಉಪನ್ಯಾಸಕ ದೀಪಕ ನಾಯ್ಕ, ಉಮೇಶ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net