

ಕುಮಟಾ: ನಮ್ಮ ಧರ್ಮ, ಸಂಸ್ಕೃತಿ ಹಾಗೂ ಭಾಷೆ ಕಲ್ಮಶವಾಗದಂತೆ ನಮ್ಮತನ ಉಳಿಸಿಕೊಳ್ಳುವತ್ತ ಸದಾ ಜಾಗೃತವಾಗಿರಬೇಕು ಎಂದು ಸೆಲ್ಕೋ ಸೋಲಾರ್ದ ಸಿಇಒ ಮೋಹನ ಭಾಸ್ಕರ ಹೆಗಡೆ ತಿಳಿಸಿದರು.
ದೀವಗಿಯಲ್ಲಿ ಶ್ರೀ ರಾಮಾನಂದ ಅವಧೂತ ಸ್ವಾಮೀಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಲವು ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ, ಸಂಸ್ಕೃತಿ, ಮಾತೃಭಾಷೆಯಿಂದಲೇ ನಮ್ಮ ಅಸ್ಮಿತೆಯು ರೂಪುಗೊಂಡಿರುತ್ತದೆ. ಅವನ್ನು ಬದಲಾಯಿಸುವ ಪ್ರಯತ್ನ ಸಲ್ಲ, ನಮ್ಮತನ ಲೋಪವಾಗುವ ಅಪಾಯ ಎದುರಿಸಬೇಕಾಗುತ್ತದೆ. ರಾಮಾನಂದ ಅವಧೂತರ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಎಸಿಎಫ್ ಕೃಷ್ಣ ಗೌಡ ಮಾತನಾಡಿ, ವಿದ್ಯಾರ್ಥಿಗಳು ಸುತ್ತಲಿನ ಪರಿಸರ ಹಾಗೂ ಜೀವವೈವಿಧ್ಯ ಸಂರಕ್ಷಣೆಯಲ್ಲಿ ಕಾಳಜಿ ಬೆಳೆಸಿಕೊಳ್ಳಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ಪ್ರಕಾಶ ಪಂಡಿತ ಮಾತನಾಡಿ, ಕಳೆದ 6 ವರ್ಷಗಳಿಂದ ರಾಮಾನಂದ ಟ್ರಸ್ಟ್ ಸುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುತ್ತಿದೆ ಎಂದರು.
ಟ್ರಸ್ಟಿಗಳಾದ ಡಾ. ಜಿ.ಜಿ. ಹೆಗಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ 500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಎಂ.ಜಿ. ಭಟ್, ಪ್ರಮುಖರಾದ ಹಿರಿಯ ಅರ್ಚಕ ಬಾಲಕೃಷ್ಣ ಅಡಿ, ಪದ್ಮನಾಭ ಹೆಗಡೆ, ಸತ್ಯ ನಾಯ್ಕ, ಕೆ.ಜಿ. ಗೌಡ, ಹೇಮಂತಕುಮಾರ ಗಾಂವ್ಕರ್ ಇತರರು ಇದ್ದರು.