

ಸಿದ್ದಾಪುರ: ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡುವುದರ ಜತೆಗೆ ಸಂಘ ಹಾಗೂ ಒಕ್ಕೂಟದಿಂದ ಸಿಗಬಹುದಾದ ಸೌಲಭ್ಯಗಳನ್ನು ಹಾಲು ಉತ್ಪಾದಕರು ಪಡೆದುಕೊಳ್ಳಬೇಕು ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ ಬೇಡ್ಕಣಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಹಾಲು ಉತ್ಪಾದಕ ಸಹಕಾರಿ ಸಂಘದಲ್ಲಿ ಗುರುವಾರ ಕರೆಯಲಾಗಿದ್ದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಸಂಘದಿಂದ ನೀಡಲಾಗುವ ಪ್ರೋತ್ಸಾಹಕ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗ ಪ್ರತಿನಿತ್ಯ 70 ಸಾವಿರ ಲೀಟರ್ಗಿಂತ ಹೆಚ್ಚು ಹಾಲಿನ ಶೇಖರಣೆ ಆಗುತ್ತಿದೆ. ಇದು ದ್ವಿಗುಣಗೊಳ್ಳಬೇಕು. ಸಂಘದ ಪ್ರತಿಯೊಬ್ಬರು ಕಲ್ಯಾಣ ಸಂಘದ ಸದಸ್ಯರಾಗಬೇಕು ಎಂದರು.
ಧಾರವಾಡ ಹಾಲು ಒಕ್ಕೂಟದ ಸಿದ್ದಾಪುರ ಉಪವಿಭಾಗದ ಡಾ. ವಿನಾಯಕ ಬಿರಾದಾರ ಹಾಗೂ ಹಾರ್ಸಿಕಟ್ಟಾ ಪಶುಸಂಗೋಪನಾ ಇಲಾಖೆಯ ಡಾ.ಶ್ರೇಯಸ್ ಅವರು ಜಾನುವಾರುಗಳ ನಿರ್ವಹಣೆ, ರೋಗದ ಹಾಗೂ ಜಾನುವಾರು ವಿಮೆ ಕುರಿತು ಹಾಗೂ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಸಂಘದಿಂದ ಹಾಲು ಉತ್ಪಾದಕರಿಗೆ ಇರುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಬಹುಮಾನ ವಿತರಣೆ: ಸಂಘಕ್ಕೆ ಹೆಚ್ಚು ಹಾಲು ನೀಡಿದ ಗೋಪಾಲಕೃಷ್ಣ ಹೆಗಡೆ ಊರತೋಟ, ಅಣ್ಣಪ್ಪ ನಾಯ್ಕ ಹಲಸಗಾರ, ಶ್ರೀಧರ ಭಟ್ಟ ಮಾಣಿಖ್ಯನಮನೆ, ಸುಧಾಕರ ಮಡಿವಾಳ ಮುಠ್ಠಳ್ಳಿ, ಶ್ರೀಕಾಂತ ಶಾನಭಾಗ ಹಾರ್ಸಿಕಟ್ಟಾ., ಎಂ.ಜಿ. ನಾಯ್ಕ ಹುಬ್ಬಗೈ ಅವರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಸಂಘದ ಅಧ್ಯಕ್ಷ ಶ್ರೀಧರ ಎಂ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯಾಧ್ಯಾಪಕ ಎಂ.ಆರ್. ಹೆಗಡೆ ರ್ಕಸವಲ್, ಸಂಘದ ಉಪಾಧ್ಯಕ್ಷ ಮಂಜುನಾಥ ಗಣಪ ನಾಯ್ಕ ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ವಾರ್ಷಿಕ ವರದಿ ಮಂಡಿಸಿ ಕಾರ್ಯಕ್ರಮ ನಿರ್ವಹಿಸಿದರು.