

ಹುಕ್ಕೇರಿ: ಜನರು ನಮ್ಮನ್ನು ನಂಬಿ ಅಧಿಕಾರ ಕೊಟ್ಟಿದ್ದಾರೆ. ಅಧಿಕಾರ ಬಂದಾಗ ಜನಸೇವೆ ಮಾಡುವುದು ಮುಖ್ಯ. ಈ ನಿಟ್ಟಿನಲ್ಲಿ ಜನಪರ ಕಾರ್ಯಗಳನ್ನು ಕೈಗೊಂಡು ಜನನಾಯಕರಾಗಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದಲ್ಲಿ ಜರುಗಿದ 2,000ನೇ ಮದ್ಯವರ್ಜನ ಶಿಬಿರದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅವರನ್ನು ಸತ್ಕರಿಸಿ ಮಾತನಾಡಿದರು. ಆಸ್ತಿ, ಅಂತಸ್ತು ಮತ್ತು ಅಧಿಕಾರ ಶಾಶ್ವತ ಅಲ್ಲ. ಆದರೆ ನಾವು ಅಧಿಕಾರದಲ್ಲಿದ್ದಾಗ ಕೈಗೊಂಡ ಜನಪರ ಕಾರ್ಯಗಳು ಶಾಶ್ವತವಾಗಿ ಹೆಸರು ಕೊಡುತ್ತವೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಾವೀರ ನಿಲಜಗಿ ಅವರ ಮನೆತನ ಧರ್ಮಸ್ಥಳದ ಬಗ್ಗೆ ಅಪಾರ ಶ್ರದ್ಧೆ ಇಟ್ಟುಕೊಂಡಿದೆ. ಮುಂಬರುವ ದಿನಗಳಲ್ಲಿ ಇವರಿಗೆ ಹೆಚ್ಚಿನ ಸ್ಥಾನಮಾನ ದೊರಕಲಿ ಎಂದು ಆಶಿಸಿದರು. ಸನ್ಮಾನ ಸ್ವೀಕರಿಸಿದ ಮಹಾವೀರ ನಿಲಜಗಿ ಮಾತನಾಡಿ, ಹುಕ್ಕೇರಿ ತಾಲೂಕಿನ ಜನರ ಮತ್ತು ಗುರು ಹಿರಿಯರ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದರು.