

ಮೈಸೂರು: ಕನ್ನಡ ನಾಡು-ನುಡಿಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳುವ ಮೂಲಕ ಕನ್ನಡ ಪರವಾದ ಚಟುವಟಿಕೆಗಳು ನಿರಂತರವಾಗಿ ನಡೆಯಲು ಸಹಕರಿಸಬೇಕು ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ದೇವರಾಜ ಮೊಹಲ್ಲ ನಾಗರಿಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಕನ್ನಡ ನಾಡು-ನುಡಿ ಬೆಳವಣಿಗೆಗೆ ಶ್ರಮಿಸಿದವರನ್ನು ಸ್ಮರಿಸಬೇಕು ಎಂದರು.
ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ಕರುನಾಡು ಎಂದೆಂದೂ ಸುಂದರ ತೋಟವಾಗಿಯೇ ಉಳಿಯಬೇಕು. ಧರ್ಮ ಸಹಿಷ್ಣತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಸಮಾಗಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡ ನಾಡಿನ ಐಕ್ಯತೆಯ ಯತ್ನ ನಿರಂತರವಾಗಿ ನಡೆದಿದ್ದು, ಕರ್ನಾಟಕ ಏಕೀಕರಣದ ಚರಿತ್ರೆಯನ್ನು ಎಲ್ಲರೂ ತಿಳಿಯುವುದು ಅಗತ್ಯ. ಕರ್ನಾಟಕ ಏಕೀಕರಣ ಮತ್ತು ನಾಮಕರಣದ ಸುದೀರ್ಘ ಹೋರಾಟದ ಫಲವಾಗಿ 1956ರ ನ.1ರಂದು ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದಿತು ಎಂದರು.
ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಕನ್ನಡ ಹಿತ ರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ಮಂಜುನಾಥ್, ರವಿ, ಪ್ರಮೋದ್ ಗೌಡ, ಸತ್ಯಪ್ಪ, ಈರೇಗೌಡ, ಪ್ರಜ್ವಲ್, ನಿತಿನ್, ಮೋಹನ್ ಕುಮಾರ್, ಚರಣ್ ಇತರರಿದ್ದರು.