

ಹುನಗುಂದ: ಗ್ರಾಮೀಣ ಭಾಗದ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ಕಾಳಜಿ ವಹಿಸಿದಾಗ ಮಾತ್ರ ಡೆಂಘೆ ಮತ್ತು ಚಿಕೂನ್ ಗುನ್ಯಾ ಇತರ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದು ತಾಲೂಕು ವೈದಾಧಿಕಾರಿ ಡಾ.ಪ್ರಶಾಂತ ತುಂಬಗಿ ಹೇಳಿದರು.
ತಾಲೂಕಿನ ನಾಗೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಡೆಂಘೆ ಮಾಸಾಚರಣೆ ಕಾರ್ಯಕ್ರಮ ಹಾಗೂ ಲಾರ್ವಾಹಾರಿ ಮೀನು ಸಾಕಣೆ ತೊಟ್ಟಿ ಉದ್ಘಾಟಿಸಿ ಅವರು ಮಾತನಾಡಿದರು. ಕೊಳಚೆಯಿಂದ ಸೊಳ್ಳೆಗಳು ಸೃಷ್ಟಿಯಾಗಿ ಅನೇಕ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುತ್ತವೆ. ಮನೆಗಳಲ್ಲಿ ನೀರಿನ ತೊಟ್ಟಿಗಳನ್ನು ಸರಿಯಾಗಿ ಆಗಾಗ ತೊಳೆಯುವುದು ಮುಖ್ಯ ಎಂದರು.
ತೊಟ್ಟಿಯಲ್ಲಿ ಮೀನು ಬಿಡುವ ಮೂಲಕ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಪ್ಪ ಬೀಳಗಿ ಉದ್ಘಾಟಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ.ಪ್ರಿಯಾಂಕಾ, ಗ್ರಾಪಂ ಉಪಾಧ್ಯಕ್ಷ ಅಜ್ಜಪ್ಪ ನರಗುಂದ, ಸದಸ್ಯರಾದ ಮಹಾಂತೇಶ ಮುರಡಿ, ನಿಂಗನಗೌಡ ಪರತಗೌಡರ, ನೀಲಗಂಗವ್ವ ನರಗುಂದ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎ.ಎಚ್. ಹಿರೇಅಮರೇಗೌಡರ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ನೀಲಮ್ಮ ಗೌಡರ, ಡಾ.ವಿಜಯಕುಮಾರ್ ಹವಾಲ್ದಾರ, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. ಶಂಕರ ಮಠಪತಿ ನಿರೂಪಿಸಿದರು.