

ಗಂಗಾವತಿ: ಪ್ರಚಲಿತ ವಿಷಯಗಳ ಚರ್ಚೆ ಮತ್ತು ಸಂವಾದಗಳನ್ನು ಆಯೋಜಿಸಲು ವಿದ್ಯಾರಣ್ಯ ವಿಚಾರ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ವೈಚಾರಿಕತೆ ಮತ್ತು ಅಧ್ಯಾತ್ಮಕ್ಕೆ ಒತ್ತು ನೀಡಲಾಗುವುದು ಎಂದು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಹೇಳಿದರು.
ನಗರದ ಶ್ರೀರಾಮ ಮಂದಿರದಲ್ಲಿ ಭಾನುವಾರ ಅಸ್ತಿತ್ವಕ್ಕೆ ಬಂದ ವಿದ್ಯಾರಣ್ಯ ವಿಚಾರ ವೇದಿಕೆ ಉದ್ಘಾಟಿಸಿ ಮಾತನಾಡಿದರು. ವಾಸ್ತವಿಕತೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಿದ್ದು, ಸಂವಾದದ ಮೂಲಕ ಚರ್ಚೆಯ ಮುನ್ನೆಲೆಗೆ ತರಬೇಕಿದೆ. ಅಧ್ಯಾತ್ಮದತ್ತ ಜನರನ್ನು ಕೊಂಡೊಯ್ಯಬೇಕಿದ್ದು, ವೈಚಾರಿಕ ಪ್ರಜ್ಞೆಯನ್ನು ಬೆಳೆಸಬೇಕಿದೆ ಎಂದರು.
ಸಾಹಿತಿ ಲಿಂಗಾರೆಡ್ಡಿ ವೀ.ಆಲೂರು ಮಾತನಾಡಿ, ಪಕ್ಷ, ಜಾತಿ ಭೇದವಿಲ್ಲದೆ ಒಳ್ಳೆಯ ವಿಚಾರಗಳ ವಿನಿಮಯಕ್ಕೆ ವೇದಿಕೆ ಬಳಕೆಯಾಗಬೇಕಿದ್ದು, ಗುಣಾತ್ಮಕ ವಿಷಯಗಳ ಚರ್ಚೆಗೆ ಅನುಭವ ಮಂಟಪದಂತೆ ಕಾರ್ಯನಿರ್ವಹಿಸಲಿ ಎಂದರು.
ವಿಜಯನಗರ ಸಾಮ್ರಾಜ್ಯದ ಇತಿಹಾಸದ ಕುರಿತು ಸಂಪನ್ಮೂಲ ವ್ಯಕ್ತಿ ಹೊಸ್ಕೆರೆ ಮಲ್ಲಿಕಾರ್ಜುನ ಮಾತನಾಡಿದರು. ವೇದಿಕೆ ಸಂಚಾಲಕ ಶ್ರವಣಕುಮಾರ ರಾಯ್ಕರ್, ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಡಾ.ಬಸವರಾಜ ಅಯೋಧ್ಯಾ, ಜೆ.ನಾಗರಾಜ, ಸುಬ್ರಮಣ್ಯರಾಯ್ಕರ್, ಚಿದಾನಂದಪ್ಪ, ಜೆ.ಗಿರಿಧರ್, ಅಶೋಕ ರಾಯ್ಕರ್ ಇತರರಿದ್ದರು.
ಪರಂಪರೆ ಮತ್ತು ಇತಿಹಾಸ ಬಿಂಬಿಸುವ ವಿಷಯಗಳನ್ನು ವೇದಿಕೆ ಮೂಲಕ ಚರ್ಚಿಸಲಾಗುತ್ತಿದ್ದು, ಪ್ರತಿಯೊಬ್ಬರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪ್ರಚಲಿತ ವಿದ್ಯಮಾನಗಳಿಗೆ ಆದ್ಯತೆ ನೀಡಲಾಗುವುದು. ಶ್ರವಣಕುಮಾರ ರಾಯ್ಕರ್ ಸಂಚಾಲಕ, ವಿದ್ಯಾರಣ್ಯ ವಿಚಾರ ವೇದಿಕೆ.