ಮೌಢ್ಯತೆಯಿಂದ ಜನರು ಹೊರಬರಲಿ

BLY-13-2
ಬಳ್ಳಾರಿ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಮ್ಮ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಸುಬ್ಬರಾಜು ಮಾತನಾಡಿದರು.
Published on

ಬಳ್ಳಾರಿ : ಇಂದಿನ ವೈಜ್ಞಾನಿಕ ಯುಗದಲ್ಲಿ ಜನರು ಮೌಢ್ಯತೆಯಿಂದ ಹೊರಬರಬೇಕಿದೆ ಎಂದು ಹೈದರಾಬಾದ್‌ನ ಅಮ್ಮ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷ ಗಂಜಿ ಈಶ್ವರಲಿಂಗಂ ಹೇಳಿದರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಮ್ಮ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೇತ್ರದಾನ, ರಕ್ತದಾನ, ದೇಹದಾನದ ಬಗ್ಗೆ ಜನರಲದಲಿ ಇಂದಿಗೂ ಅಪನಂಬಿಕೆ, ಮೌಢ್ಯತೆ ಇದೆ. ಅದರಿಂದ ಹೊರಬರಬೇಕಿದೆ. ಇಂದಿನ ಜಗತ್ತಿನಲ್ಲಿ ಯುವ ಜನತೆಯಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು. ಹೊರತು ಮೌಢ್ಯತೆ ಕಡೆಗೆ ಕೊಂಡೊಯ್ಯಬಾರದು ಎಂದು ಸಲಹೆ ನೀಡಿದರು.

ಮನುಷ್ಯ ಬದುಕಿದ್ದಾಗ ಹಾಗೂ ನಂತರವೂ ಅನೇಕ ದಾನವನ್ನು ಮಾಡಬಹುದು. ಸಾವಿನ ಬಳಿಕವೂ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ರವಾನಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಯುವ ಜನತೆ ರಕ್ತದಾನದಂತಹ ಸಮಾಜಮುಖಿ ಕಾರ್ಯಗಳಿಗೆ ಮುಂದಾಗಬೇಕು ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡುತ್ತೇವೆ. ಅದರಿಂದ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಆದರೆ ಮೃತಪಟ್ಟ ನಂತರವೂ ದೇಹ ಅನೇಕರಿಗೆ ಸಹಾಯವಾಗಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನಮ್ಮ ದೇಶದಲ್ಲಿ ಮೃತದೇಹಗಳ ದಾನ ಮಾಡುವವರ ಸಂಖ್ಯೆ ಕಡಿಮೆ ಇದೆ. ನೇತ್ರದಾನ ಮಾಡುವವರ ಸಂಖ್ಯೆಯಲ್ಲಿ ಶ್ರೀಲಂಕಾ ಜಗತ್ತಿಗೆ ಮಾದರಿ ಆಗಿದೆ. ನಮ್ಮ ಯುವ ಜನತಗೆ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.

ಅಮ್ಮ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿ ಸುಬ್ಬರಾಜು ಮಾತನಾಡಿ, ಮಾನವನ ಹುಟ್ಟು ಮತ್ತು ಸಾವು ಪ್ರಕೃತಿಯಲ್ಲಿ ಸಹಜಕ್ರಿಯೆಯಲ್ಲಿ ಒಂದಾಗಿದೆ. ಮನುಷ್ಯ ಹುಟ್ಟಿದ ನಂತರ ದಾನ, ಧರ್ಮಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾನೆ. ಇದ್ದಾಗಲೂ ಇಲ್ಲವೇ ಸತ್ತಾಗಲೂ ನಾಲ್ಕು ಜನರಿಗೆ ಉಪಕಾರಿಯಾಗಿ ಬಾಳಬೇಕು. ಅದಕ್ಕೆ ರಕ್ತದಾನ, ನೇತ್ರದಾನ, ದೇಹದಾನ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಪಘಾತದ ಸಂದಂರ್ಭದಲ್ಲಿ ವ್ಯಕ್ತಿ ಬದುಕುಳಿಯುವುದಿಲ್ಲ ಎಂದು ವೈದ್ಯರು ಸಲಹೆ ನೀಡಿದರೂ ಅಂತಹ ವ್ಯಕ್ತಿಯ ದೇಹ, ನೇತ್ರ, ಕಿಡ್ನಿ, ಲೀವರ್, ಚರ್ಮವನ್ನು ಬೇರೆಯವರಿಗೆ ದಾನ ಮಾಡುವ ಮನೋಭಾವನೆಯಲ್ಲಿ ಎಲ್ಲರೂ ಬೆಳೆಸಿಕೊಳ್ಳಬೇಕು. ಚರ್ಮದಾನ ಮಾಡುವುದರಿಂದ ಆಸಿಡ್‌ನಲ್ಲಿ ದಾಳಿಗೊಳಗಾದವರಿಗೆ ಅನುಕೂಲವಾಗಲಿದೆ. ಕೇಶದಾನ ಮಾಡಿದರೆ ಕ್ಯಾನ್ಸರ್ ಪೀಡಿತರಿಗೆ ಸಹಕಾರಿಯಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ ರೆಡ್ಡಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗಿರಿಸಾಬ್ ದಿನ್ನಿ, ಸಂಘಟಕ ಲಕ್ಷ್ಮೀನಾರಾಯಣ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net