

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ಸರ್ಕಾರದ ವಿವಿಧ ಯೋಜನೆಗಳ ಕುರಿತು ನಗರ ಮಟ್ಟದಲ್ಲಿ ಏರ್ಪಡಿಸಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಇಲ್ಲಿನ ಚಂದ್ರಕಾಂತ ಬೆಲ್ಲದ ನಗರದಲ್ಲಿ ಶನಿವಾರ ಜರುಗಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 9 ವರ್ಷಗಳ ಅವಧಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಗ್ರಾಮೀಣ ಹಾಗೂ ನಗರ ಜನರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯಾತ್ರೆಯಲ್ಲಿ ಆಯುಷ್‌ಮಾನ್ ಭಾರತ ಯೋಜನೆ ಅಡಿ ಆರೋಗ್ಯ ತಪಾಸಣೆ ಶಿಬಿರ, ಆಧಾರ ಕಾರ್ಡ್, ಉಜ್ವಲಾ ಯೋಜನೆ, ಪ್ರಧಾನ ಮಂತ್ರಿ ಸ್ವನಿಧಿ, ಬ್ಯಾಂಕಿನಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಮತ್ತು ಜೀವನ ಭೀಮಾ ಯೋಜನೆ, ಮುದ್ರಾ ಮತ್ತು ಇತರ ಯೋಜನೆಗಳು ಜಾರಿಯಲ್ಲಿದ್ದು, ಜನರು ಯೋಜನೆಗಳ ಲಾಭವನ್ನು ಸ್ಥಳದಲ್ಲೇ ಮಾಹಿತಿ ಪಡೆದು ಅರ್ಜಿ ಸಲ್ಲಿಸುವ ವ್ಯೇವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಯೋಜನೆಗಳ ಸಮರ್ಪಕ ಮಾಹಿತಿ ನೀಡುವ ಉದ್ದೇಶದಿಂದ ಇಡೀ ದೇಶದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಆರಂಭಿಸಲಾಗಿದೆ. ಯೋಜನೆಗಳ ಲಾಭವನ್ನು ಪಡೆದು ತಮ್ಮ ಸ್ವಂತ ಅಭಿವೃದ್ಧಿ ಜತೆಗೆ ದೇಶದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಭೋದಿಸಲಾಯಿತು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿಪತ್ರ ವಿತರಿಸಲಾಯಿತು. ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯುಳ್ಳ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಶಾಸಕ ಅರವಿಂದ ಬೆಲ್ಲದ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಕೆನರಾ ಬ್ಯಾಂಕ್ ಮಹಾ ಪ್ರಬಂಧಕ ಎಂ.ವಿಜಯಕುಮಾರ, ಆರ್.ಕೆ ದೊರೆ, ಲೀಡ್ ಬ್ಯಾಂಕ್‌ನ ಯೋಗಿತಾ, ಕೇಂದ್ರ ಸಂವಹನ ಇಲಾಖೆ ನಗರ ನೋಡಲ್ ಅಧಿಕಾರಿ ಮುರಳೀಧರ ಕಾರಭಾರಿ, ರುಡ್ ಸೆಟ್ ನಿರ್ದೇಶಕ ಗವಿಸಿದ್ದಪ್ಪ, ಅಧಿಕಾರಿಗಳು, ಪಾಲಿಕೆ ಸದಸ್ಯರು, ಇತರರು ಇದ್ದರು.