

ವಿಜಯವಾಣಿ ಸುದ್ದಿಜಾಲ ಧಾರವಾಡ
ವೈದ್ಯಕೀಯ ವೃತ್ತಿ ಪವಿತ್ರವಾದದು. ಆರೋಗ್ಯಪೂರ್ಣ ಬದುಕು ಕಟ್ಟಿಕೊಡುವ ಶಕ್ತಿ ವೈದ್ಯರಲ್ಲಿದೆ. ವೈದ್ಯರ ಪ್ರಾಮಾಣಿಕತೆ, ಸಮರ್ಪಣೆ ಮನೋಭಾವ ಹಾಗೂ ಕಠಿಣ ಪರಿಶ್ರಮ ಶ್ಲಾಘನೀಯ ಎಂದು ಐಎಂಎ ಧಾರವಾಡ ಅಧ್ಯಕ್ಷ ಡಾ. ಸತೀಶ ಇರಕಲ್ ಹೇಳಿದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಧಾರವಾಡ ಶಾಖೆ ವತಿಯಿಂದ ಐಎಂಎ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ವೈದ್ಯ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರೊನಾ ಸಮಯದಲ್ಲಿ ವೈದ್ಯರು ತಮ್ಮ ಹಾಗೂ ಕುಟುಂಬಸ್ಥರ ಆರೋಗ್ಯದ ಬಗ್ಗೆ ಹೆಚ್ಚಾಗಿ ಚಿಂತಿಸದೆ, ಇಡೀ ಮನುಕುಲದ ಉಳಿವಿಗೆ ಹಗಲಿರುಳು ಶ್ರಮಿಸಿದರು. ಇಂತಹ ಕಠಿಣ ಸಮಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ವೈದ್ಯರನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಡಾ. ರಾಜನ್ ದೇಶಪಾಂಡೆ ಮಾತನಾಡಿ, ರೋಗಿಗಳಿಗೆ ಚಿಕಿತ್ಸೆ ನೀಡುವಾಗ ನೈತಿಕತೆ ಹೊಂದಿರಬೇಕು. ಇದಲ್ಲದೆ, ಲಭ್ಯವಿರುವ ಅತ್ಯುತ್ತಮ ಸೌಲಭ್ಯಗಳಲ್ಲಿ ಕಡಿಮೆ ವೆಚ್ಚದ ಚಿಕಿತ್ಸೆ ನೀಡಲು ಯುವ ವೈದ್ಯರು ಪ್ರಯತ್ನಿಸಬೇಕು. ರೋಗಿಗಳು, ಅವರ ಸಂಬಂಧಿಕರು ವೈದ್ಯರಲ್ಲಿ ನಂಬಿಕೆ ಇಡಬೇಕು ಎಂದರು.
ನ್ಯಾಯವಾದಿ ವೀರೇಶ ಬೂದಿಹಾಳ ಮಾತನಾಡಿದರು. ಹಿರಿಯ ವೈದ್ಯರಾದ ಡಾ. ಬಿ.ಸಿ. ವಸ್ತ್ರದ, ಡಾ. ಸತೀಶ ಇರಕಲ್, ಡಾ.ನವೀನ ಮಂಕಣಿ, ಡಾ. ಸಂತೋಷ ಜೀವಣ್ಣವರ, ಡಾ. ಸಂದೀಪ ಪ್ರಭು, ಡಾ.ಅಕ್ತರ್ ಜಹಾನ್, ಡಾ. ವಂದನಾ ಗ್ರಾಮಪುರೋಹಿತ, ಡಾ. ಉದಯ ಬಂಡೆ, ಡಾ. ರವಿಕುಮಾರ ಜಾಧವ, ಡಾ. ಕವಿತಾ ಜಾಧವ ಹಾಗೂ ಕರ್ನಾಟಕ ವೈದ್ಯಕಿಯ ಮಂಡಳಿ ಸದಸ್ಯರಾಗಿ ನಾಮನಿರ್ದೇಶನಗೊಂಡ ಡಾ. ಸುಧೀರ ಜಂಬಗಿ, ಅತ್ಯುತ್ತಮ ಆರೋಗ್ಯ ವೃತ್ತಿಪರ ಪ್ರಶಸ್ತಿ ಪಡೆದ ಡಾ.ಬೀನಾ ಕುಲಕರ್ಣಿ ಅವರನ್ನು ಸನ್ಮಾನಿಸಿದರು.
ಡಾ. ಅರವಿಂದ ಯೇರಿ, ಹಿರಿಯ ವೈದ್ಯರಾದ ಡಾ. ವೈ.ಎನ್. ಇರಕಲ್, ಡಾ. ಆರ್.ಜಿ. ಪುರಾಣಿಕ್, ಡಾ. ಹಂದಿಗೋಳ, ಡಾ.ನಾಡಕರ್ಣಿ, ಡಾ. ಹುಕ್ಕೇರಿ, ಡಾ. ಪೈ, ಡಾ. ಸಾಂಬ್ರಾಣಿ, ಡಾ. ಕವಿತಾ ಮಂಕಣಿ, ಡಾ.ವಾಣಿ ಇರಕಲ್, ಡಾ. ಸುಹಾಸ ಹಂಚಿನಮನಿ, ಇತರರು ಇದ್ದರು.