ಪಾಲಕರು ಮಕ್ಕಳಿಗೆ ಆದರ್ಶವಾಗಿರಲಿ

mysore
Published on

ಮೈಸೂರು: ಮಕ್ಕಳಿಗೆ ಮೌಲ್ಯ ಕಲಿಸಬೇಕು. ತಂದೆ- ತಾಯಿಯೇ ಮಕ್ಕಳಿಗೆ ಆದರ್ಶವಾಗಿರಬೇಕು ಎಂದು ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಬಿ.ಬಾಲಕೃಷ್ಣಯ್ಯ ಹೇಳಿದರು.


ತಿಲಕ್‌ನಗರದ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲಕರು ಹೇಗಿರುತ್ತಾರೋ ಮಕ್ಕಳು ಅದನ್ನು ಅನುಕರಿಸುತ್ತಾರೆ. ಆದ್ದರಿಂದ ಪಾಲಕರು ಮಾದರಿಯಾಗುವಂತೆ ನಡೆದುಕೊಳ್ಳಬೇಕು. ಮಕ್ಕಳಿಗೆ ಸಾಕಷ್ಟು ಸಮಯ ನೀಡಬೇಕು ಎಂದರು.


ಸೇವೆ ಮಾಡಲು ಮನಸ್ಸು ಮುಖ್ಯವೇ ಹೊರತು ಹಣ ಮುಖ್ಯವಲ್ಲ. ಗ್ರಾಮೀಣ ಪ್ರದೇಶದವರು ಹೆಚ್ಚು ಪ್ರಾಮಾಣಿಕರು, ಸೃಜನಶೀಲರು, ಧೈರ್ಯವಂತರು, ಸಹಾಯ ಮಾಡುವ ಮನಸ್ಥಿತಿಯವರು ಆಗಿರುತ್ತಾರೆ. ಅದು ಆ ಮಣ್ಣಿನ ಗುಣ ಎಂದು ಅಭಿಪ್ರಾಯಪಟ್ಟರು.


ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯ ಅಧೀಕ್ಷಕ ಸತೀಶ್ ಕ್ಯಾತನಹಳ್ಳಿ ಮಾತನಾಡಿ, ಮಕ್ಕಳಿಗೆ ನೈತಿಕ ಪಾಠ ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು. ಯಾವುದೇ ಒತ್ತಡ ಮಾಡಿಕೊಳ್ಳದೇ ನೆಮ್ಮದಿಯಿಂದ ಇರಬೇಕು ಎಂದರು.


ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಅವಕಾಶಗಳನ್ನು ಬಳಸಿಕೊಂಡು ಯಾರು ಬೇಕಾದರೂ ವಿದ್ಯಾವಂತರಾಗಬಹುದು, ಪ್ರತಿಭಾವಂತರಾಗಬಹುದು. ಮೊದಲಿನಂತೆ ಸರ್ಕಾರಿ ಕೆಲಸಗಳಿಗೆ ಕಾದು ಕೂರಬೇಕಾಗಿಲ್ಲ. ಖಾಸಗಿ ವಲಯದಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿ ಬೇಕಾದರೂ ಕೆಲಸ ಪಡೆಯಬಹುದು. ಆದ್ದರಿಂದ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು ಎಂದರು.


ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯ ಮೋಹನ್, ಗಂಗಾಧರ್, ದೀಕ್ಷಿತ್, ಶ್ರೀಶಾಂತ್, ಚಂದ್ರಶೇಖರ್, ಕೆ.ಧರ್ಮ, ಉಸ್ಮಾನ್, ಜಿ.ಎನ್.ಅಶೋಕ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀ ಗಣೇಶ ಕಲ್ಚರ್ ಆ್ಯಂಡ್ ಎಜುಕೇಷನ್ ಟ್ರಸ್ಟ್‌ನ ಸಂಸ್ಥಾಪಕಿ ಎಂ.ಸಿ. ಶೋಭಾರಾಣಿ, ಗೋಪಾಲಯ್ಯ, ಶ್ರೀಕಂಠಮೂರ್ತಿ, ರೂಪಾ, ಕೋಟಿ ವೃಕ್ಷದ ಪರಿಸರ ಚಂದ್ರು, ರಂಗಣ್ಣ, ಕೆ. ನಾಗರಾಜ್, ಪ್ರದೀಪ್, ಕುಮಾರ್, ನವೀನ್‌ಕುಮಾರ್, ರವಿ, ಮನೋಹರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net