

ಕೆ.ಆರ್.ನಗರ: ಬಡವರ್ಗದವರಿಗೆ ಸಂಘ-ಸಂಸ್ಥೆಗಳು ಸೇವಾ ಮನೋಭಾವದಿಂದ ಕೈಲಾದಷ್ಟು ಸೇವೆ ಮಾಡಿದಲ್ಲಿ ಒಂದಷ್ಟು ಸಮಾನತೆ ಕಾಣಲು ಸಾಧ್ಯ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಕೆ.ಜೆ.ಶ್ರೀಧರನಾಯಕ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಎಟಿಎಂ ಗೆಳೆಯರ ಬಳಗ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿದರೂ, ಬೆಳೆಯುವುದರಲ್ಲಿ ಎಡವಟ್ಟು ಮಾಡಿಕೊಂಡು ಅಷ್ಟೇ ವೇಗದಲ್ಲಿ ಮುಚ್ಚಿಕೊಳ್ಳುತ್ತಿವೆ. ಆದರೆ ಇಂದು ಪ್ರಾರಂಭವಾಗಿರುವ ಸಂಸ್ಥೆ ವಿನೂತನ ರೀತಿಯಲ್ಲಿ ಸೇವಾ ಮನೋಭಾವ ಇಟ್ಟುಕೊಂಡು ಅಸ್ತಿತ್ವಕ್ಕೆ ತರಲಾಗಿದ್ದು, ಆರಂಭದಲ್ಲಿಯೇ ಅಂಗವಿಕಲರು, ಬಡವರು, ಶಾಲಾ ಮಕ್ಕಳು ಹಾಗೂ ಸಮಾಜದಲ್ಲಿನ ನಿರ್ಗತಿಕರನ್ನು ಹುಡುಕಿ ಅವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.
1996ರಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಪ್ರಾರಂಭಿಸಿರುವ ಗೆಳೆಯರ ಬಳಗದಲ್ಲಿ ಸಮಾಜ ಸೇವೆಯನ್ನು ಮನದಲ್ಲಿಟ್ಟುಕೊಂಡು ಮುಂದೆ ಬಂದಿರುವವರೇ ಹೆಚ್ಚಾಗಿದ್ದಾರೆ. ಹಾಗಾಗಿ ಇಂತಹ ಸಂಸ್ಥೆ ಬೆಳೆದು ಹೆಮ್ಮರವಾಗಿ ಸಮಾಜಕ್ಕೆ ನೆರವಾಗಲಿ ಎಂದು ಹಾರೈಸಿದರು.
ಪ್ರಾಧ್ಯಾಪಕಿ ಕೋಕಿಲಾ, ಹಂಪಾಪುರದ ಎಂ.ರಾವ್ ಮೆಮೋರಿಯಲ್ ಟ್ರಸ್ಟ್‌ನ ಸ್ವರೂಪರಾಣಿ, ಶಕ್ತಿಧಾಮದ ಉಷಾ ಮತ್ತಿತರರು ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ, ಅಂಗವಿಕಲರಿಗೆ ವಿವಿಧ ಸಲಕರಣೆ, ಬಡವರಿಗೆ ದವಸಧಾನ್ಯ, ಹಲವರಿಗೆ ನಗದು ನೀಡಿ ನೆರವಾಗಿದ್ದಲ್ಲದೆ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಬಳಗದ ಗೌರವಾಧ್ಯಕ್ಷ ಎಚ್.ಮಂಜುನಾಥ್, ಅಧ್ಯಕ್ಷ ಕೆ.ಎಸ್.ರಾಘವೇಂದ್ರ, ಉಪಾಧ್ಯಕ್ಷ ಕೆ.ಆರ್.ಯೋಗೇಶ್, ಪ್ರಧಾನ ಕಾರ್ಯದರ್ಶಿ ಕೆ.ಎನ್.ಪ್ರಶಾಂತ್, ಕಾರ್ಯದರ್ಶಿ ಮಹಮ್ಮದ್ ಮುಜಾಮಿಲ್, ಸಹ ಕಾರ್ಯದರ್ಶಿ ಜಿ.ಎಸ್.ಪ್ರಸನ್ನ, ಸಂಘಟನಾ ಕಾರ್ಯದರ್ಶಿ ಎಡತೊರೆ ಲೋಕೇಶ್, ಖಜಾಂಚಿ ಸಿ.ಜೆ.ಸುಧೀಶ್ ಕುಮಾರ್, ಸಲಹೆಗಾರ ಪಿ.ಜಗದೀಶ್, ಕಾನೂನು ಸಲಹೆಗಾರರಾದ ಶಂಕರ, ಸೋಮೇಶ್ ಇತರರಿದ್ದರು.