

ಮೈಸೂರು: ಸಮಾಜ ಹಾಗೂ ಸಮುದಾಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಂಘ-ಸಂಸ್ಥೆಗಳನ್ನು ಸ್ಥಾಪನೆ ಮಾಡಿಕೊಳ್ಳುವವರು ಸಮುದಾಯದ ಕಷ್ಟ-ಕಾರ್ಪಣ್ಯಗಳನ್ನು ನೀಗಿಸಲು ನೆರವಾಗಬೇಕು ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್ ಕಾನೂನು ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ರಾಮಾಪುರ, ಗೋಪಿಶೆಟ್ಟಿಯೂರು ನಿವಾಸಿಗಳ ವೀರಶೈವ ವೇದಿಕೆಯಾದ ಸ್ಪಂದನ ವೀರಶೈವ ಬಳಗದಿಂದ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಬಳಗದ 20ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘ-ಸಂಸ್ಥೆಗಳು ಸಮಾಜಮುಖಿ ಕಾರ್ಯಗಳನ್ನು ಹೆಚ್ಚು-ಹೆಚ್ಚು ಕೈಗೊಂಡಾಗ ಅದು ಯುವ ಸಮೂಹಕ್ಕೆ ಪ್ರೇರಣೆಯಾಗುತ್ತದೆ. ಇದರಿಂದ ಸಂಘ, ಸಂಸ್ಥೆಗಳ ಸ್ಥಾಪನೆ ಉದ್ದೇಶವೂ ಈಡೇರುತ್ತದೆ ಎಂದು ಹೇಳಿದರು. ಸಂಘ ಸಂಸ್ಥೆಗಳು ಇಂದಿನ ಯುವ ಸಮೂಹಕ್ಕೆ ಸಂಸ್ಕಾರಯುತ ಮಾರ್ಗದರ್ಶಕ ನೀಡುವ ಕೆಲಸವನ್ನು ನಿರ್ವಹಿಸುತ್ತದೆ. ಆದ್ದರಿಂದ ಸೇವಾ ಕ್ಷೇತ್ರದಲ್ಲಿ ಉತ್ತಮ ಕೆಲಸಗಳು ನಡೆದಾಗ ಅದು ಈಗಿನ ತಲೆಮಾರಿಗೆ ಸ್ಫೂರ್ತಿಯನ್ನು ತುಂಬುತ್ತದೆ ಎಂದರು.
ಇಂತಹ ಸಂಸ್ಥೆಗಳು ತಮ್ಮ ಮಾದರಿ ಕೆಲಸಗಳನ್ನು ಮುಂದುವರಿಸಲು ಯುವ ಸಮೂಹವನ್ನು ಜೊತೆಯಾಗಿ ಕರೆದುಕೊಂಡು ಹೋಗಬೇಕು. ಇದರಿಂದ ಯುವಕರಿಗೂ ಸೇವೆಯ ಬಗ್ಗೆ ಅರಿವು ಮೂಡುವುದಲ್ಲದೇ ಸಾಮಾಜಿಕ ಸ್ಥಿತಿ-ಗತಿಗಳನ್ನು ಕಣ್ಣಾರೆ ನೋಡಿ ನೈಜ ಅನುಭವವನ್ನು ಗಳಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ಹನೂರು ತಾಲೂಕಿನ ಅರಣ್ಯದಂಚಿನ ಗ್ರಾಮಗಳಾದ ರಾಮಾಪುರ ಹಾಗೂ ಗೋಪಿಶೆಟ್ಟಿಯೂರಿನ ನಿವಾಸಿಗಳು ಮೈಸೂರಿಗೆ ಬಂದು ಇಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಬಳಗವನ್ನು ಕಟ್ಟಿ ಸಾಮಾಜಿಕ ಸೇವಾ ಕಾರ್ಯ ಮಾಡುತ್ತಿರುವುದು ದೊಡ್ಡ ಸಾಧನೆಯೇ ಸರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇವಲ 30 ಸದಸ್ಯರಿಂದ ಪ್ರಾರಂಭವಾಗಿರುವ ಸ್ಪಂದನ ವೀರಶೈವ ಬಳಗದಲ್ಲಿ ಈಗ ನೂರಾರು ಜನರು ಸದಸ್ಯರಾಗಿದ್ದು, ಸೇವಾ ಕ್ಷೇತ್ರವೂ ವಿಸ್ತರಣೆಯಾಗಿರುವುದನ್ನು ನೋಡಿದರೇ ಬದ್ಧತೆಯನ್ನು ಮುಕ್ತಕಂಠದಿಂದ ಪ್ರಶಂಸಿಸಬೇಕು ಎಂದರು.
ಕಾಡಂಚಿನ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಅಂತಹ ಕಡೆ ಶಾಲೆ ಹಾಗೂ ಪ್ರಸಾದ ನಿಲಯಗಳನ್ನು ಸ್ಥಾಪನೆ ಮಾಡಿದ ಸುತ್ತೂರು ಮಠದ ಹಿಂದಿನ ಪೀಠಾಧಿಪತಿ ಶ್ರೀ ರಾಜೇಂದ್ರ ಸ್ವಾಮೀಜಿ ದೂರದೃಷ್ಟಿತ್ವದ ಫಲವನ್ನು ಈ ಸಂಘದ ಚಟುವಟಿಕೆಯ ಮೂಲಕ ಕಣ್ಣಾರೆ ಕಾಣುತ್ತಿದ್ದೇವೆ ಎಂದು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ನೆರಳಿನಲ್ಲಿ ವಿದ್ಯಾಭ್ಯಾಸ ಮಾಡಿ, ಮುಂದೆ ಉನ್ನತ ಹುದ್ದೆಗಳನ್ನು ಗಳಿಸಿಕೊಂಡವರು ತಮ್ಮ ಹಿಂದಿನ ಬದುಕನ್ನು ಮರೆಯದೇ ತಾವು ಕಲಿತದ್ದನ್ನು ಹಾಗೂ ಗಳಿಸಿದ್ದನ್ನು ಸಮಾಜಕ್ಕೆ ನೀಡುತ್ತಿರುವುದು ಶ್ರೀಗಳಿಗೆ ಸಲ್ಲಿಸುವ ಗೌರವವಾಗಿದೆ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಮಾಪುರ ಪಟ್ಟದ ಮಠದ ಶ್ರೀ ಬಸವಣ್ಣ ಸ್ವಾಮೀಜಿ, ಭಿಕ್ಷದ ಮಠದ ಸೋಮಶೇಖರ ಸ್ವಾಮೀಜಿ ಉಪಸ್ಥಿತರಿದ್ದರು. ಉದ್ಯಮಿ ಎಸ್.ನಿಶಾಂತ್ ಅಧ್ಯಕ್ಷತೆ ವಹಿಸಿದ್ದು, ಲೇಖಕ ಡಾ.ಜಯಪ್ಪ ಹೊನ್ನಾಳಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಬಳಗದ ಸಂಸ್ಥಾಪಕ ಅಧ್ಯಕ್ಷೆ ಗೀತಾ ಈಶ್ವರ್, ಉಪಾಧ್ಯಕ್ಷೆ ಪ್ರತಿಭಾ ಮಹದೇವ್ ಇತರರಿದ್ದರು.