

ಮೈಸೂರು: ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಮೊದಲು ಸಂಪೂರ್ಣವಾಗಿ ತಿಳಿದುಕೊಂಡು ಬಳಿಕ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಟಿ.ಯೋಗೀಶ್ ತಿಳಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಗರದಲ್ಲಿ ಆಯೋಜಿಸಿರುವ ಐದು ದಿನಗಳ ಆಡಳಿತಾತ್ಮಕ ತರಬೇತಿ ಹಾಗೂ ಪುನರ್ಮನನ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಜಾರಿಗೆ ತರುವ ಯೋಜನೆಗಳ ಕುರಿತು ಹೊರಡಿಸುವ ಸುತ್ತೋಲೆಗಳನ್ನು ಅಧಿಕಾರಿಗಳು ಮೊದಲು ಓದಿ ತಿಳಿದುಕೊಳ್ಳಬೇಕು. ಬಳಿಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮಾಹಿತಿ ನೀಡಬೇಕು. ಹಾಡಿ ಜನರಿಗಾಗಿ ಅನೇಕ ಯೋಜನೆಗಳಿದ್ದು, ಅವುಗಳ ಕುರಿತು ಜಾಗೃತಿ ಮೂಡಿಸಬೇಕು. ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಮನೆ, ವಿದ್ಯುತ್, ಮಕ್ಕಳ ವಿದ್ಯಾಭ್ಯಾಸ, ಸಾಕ್ಷರತೆಯ ಪ್ರಮಾಣ ಸೇರಿದಂತೆ ಇನ್ನಿತರ ಮಾಹಿತಿ ಸಂಗ್ರಹಿಸಬೇಕು. ಸಮುದಾಯದ ಜನರಿಗೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಆರ್.ರಾಜ್‌ಕುಮಾರ್ ಮಾತನಾಡಿ, ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳಿಗೆ ತರಬೇತಿ ಇಲ್ಲದೆ ಆಡಳಿತ ನಡೆಸಲು ಸಾಧ್ಯವಿಲ್ಲ. ಆದ್ದರಿಂದ 5 ದಿನಗಳ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಡಳಿತಾತ್ಮಕ ತರಬೇತಿ ನೀಡುತ್ತಿದ್ದೇವೆ. ನಿಮ್ಮ ಮೇಲೆ ಇಲಾಖೆ ಸಮುದಾಯ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು, ಹಾಡಿ ಜನರ ಅಭಿವೃದ್ಧಿ ಮಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡಲು ನಿಮ್ಮೆಲ್ಲರ ಸಹಕಾರ ಮುಖ್ಯವಾಗಿದೆ ಎಂದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಪ್ರಕಾಶ ಮಾತನಾಡಿ, ಅಧಿಕಾರಿಗಳಿಗೆ ಕಲಿಕೆ ನಿರಂತರವಾಗಿರಬೇಕು. ಎಸ್‌ಇಪಿ, ಟಿಎಸ್‌ಪಿ ಕಾಯ್ದೆ ತಿಳಿದುಕೊಳ್ಳಬೇಕು. ಅರಣ್ಯ ಇಲಾಖೆಯ ಕಾಯ್ದೆ ಬಗ್ಗೆ ತಿಳಿವಳಿಕೆ ಇರಬೇಕು. ಇಲಾಖೆಯ ಅಭಿವೃದ್ಧಿ ಮತ್ತು ಮುಂದಿನ ಯೋಜನೆಗಳನ್ನು ತಯಾರು ಮಾಡಬೇಕು. ಈ ಎಲ್ಲ ಸಮರ್ಪಕ ಮಾಹಿತಿ ಒದಗಿಸಿದಾಗ ಮಾತ್ರ ಅಭಿವೃದ್ಧಿ ಮಾಡಲು ಸಹಾಯವಾಗುತ್ತದೆ ಎಂದರು.
ಮೈಸೂರು ಜಿಲ್ಲಾ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿ, ಅಧಿಕಾರಿಗಳು ಯೋಜನೆ ಕುರಿತ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಲು ತರಬೇತಿ ಮುಖ್ಯ. ಇಲಾಖೆ ಬಗ್ಗೆ ಮಾಹಿತಿ ಇದ್ದರೆ ಧೈರ್ಯವಾಗಿ ಯಾರಿಗೆ ಬೇಕಾದರೂ ಉತ್ತರ ಕೊಡಬಹುದು. ನೀವು ಶ್ರಮಪಟ್ಟು ಕೆಲಸ ಮಾಡಿದರೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ನಿಮ್ಮ ಹುದ್ದೆಗೆ ಮೊದಲು ನೀವು ಗೌರವ ಕೊಡಿ ಎಂದು ಸಲಹೆ ನೀಡಿದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕ ಬಿ.ಎಸ್.ಪ್ರಭಾ ಅರಸ್, ಸಂಶೋಧನಾಧಿಕಾರಿ ಕೆ.ಶ್ರೀನಿವಾಸ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಕೆ.ಮಲ್ಲೇಶ್, ಇಲಾಖೆಯ ಡಾ.ಮೋಹನ್, ಕೃಷ್ಣಮೂರ್ತಿ, ಅರುಣ್‌ಪ್ರಭು, ಜಿ.ಆರ್.ಮಹೇಶ, ಬಿ.ಆರ್.ಭವ್ಯಾ, ಗುಣಧರ್, ಹೇಮಚಂದ್ರ, ಆರ್.ಮಮತಾ, ಎಂ.ಆರ್. ದಾಕ್ಷಾಯಣಿ, ಡಾ.ಕುಮಾರ್ ಉಪನ್ಯಾಸ ನೀಡಿದರು .