ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಜೀವನದ ಭಾಗವಾಗಲಿ

Let NSS be a part of students' lives.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ. ಜಾವೀದ ಜಮಾದಾರ ಮಾತನಾಡಿದರು. ಪ್ರೊ. ಅಶೋಕಕುಮಾರ ಸುರಪುರ, ಡಾ. ಕಲಾವತಿ ಕಾಂಬಳೆ, ಡಾ. ಅಶ್ವಿನಿ ಕೆ.ಎನ್. ಇದ್ದಾರೆ.
Published on

ವಿಜಯಪುರ: ಭಯೋತ್ಪಾದನೆ, ನಕ್ಸಲ್ ಚಟುವಟಿಕೆ, ಕೋಮು ಮತ್ತು ಜಾತಿಭೇದ ಸಮಸ್ಯೆಗಳು ದೇಶದ ಪ್ರಗತಿಗೆ ಅಡ್ಡಿಯಾಗುತ್ತಿರುವ ಸಮಯದಲ್ಲಿ ಎನ್‌ಎಸ್‌ಎಸ್ ತರಬೇತಿ ಕೇವಲ ಒಂದು ಕಾರ್ಯಕ್ರಮವಾಗಿರದೆ, ಯುವಜನತೆಯ ಜೀವನದ ಪ್ರಮುಖ ಭಾಗವಾಗಬೇಕು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ ಸಂಘದ ಅಧ್ಯಕ್ಷ ಡಾ. ಜಾವೀದ ಜಮಾದಾರ ಹೇಳಿದರು.

ನಗರ ಹೊರವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎನ್‌ಎಸ್‌ಎಸ್ ಸ್ನಾತಕ ಬ ಹಾಗೂ ಮುಕ್ತ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಕೈಗೊಳ್ಳುವ ಚಿಕ್ಕ ಚಿಕ್ಕ ಸೇವೆಗಳೂ ದೇಶದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂಬ ಅರಿವು ಮೂಡಿಸುವ ಕೆಲಸ ಶಿಬಿರಗಳಿಂದ ನಡೆಯಲಿದೆ ಎಂದರು.

ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಸ್ವಚ್ಛತೆ, ಸಹಬಾಳ್ವೆ, ಸಮಾನತೆ ಮತ್ತು ಸಾಮಾಜಿಕ ಪ್ರಗತಿಯಲ್ಲಿ ತೊಡಗಿಕೊಳ್ಳಬೇಕು. ಮಹಾತ್ಮ ಗಾಂಧೀಜಿ, ಬಾಬಾಸಾಹೇಬ್ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಬಸವೇಶ್ವರು ಸೇರಿ ಮತ್ತಿತರ ಮಹನೀಯರ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜದ ಒಗ್ಗಟ್ಟಿಗೆ ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಪ್ರೊ. ಅಶೋಕಕುಮಾರ ಸುರಪುರ ಮಾತನಾಡಿ, ಏಳು ದಿನಗಳ ಶಿಬಿರದಲ್ಲಿ ಶಿಸ್ತು, ಮಾತುಗಾರಿಕೆ, ಸೇವಾ ಮನೋಭಾವ ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳಾ ವಿವಿಯ ಡಾ. ಕಲಾವತಿ ಕಾಂಬಳೆ, ಡಾ. ಅಶ್ವಿನಿ ಕೆ.ಎನ್., ಡಾ. ಅಮರನಾಥ ಪ್ರಜಾಪತಿ, ವಿದ್ಯಾರ್ಥಿನಿಯರು ಇದ್ದರು.

ಋತುಜಾ ವಿಶೇಷ ಶಿಬಿರದ ವರದಿ ವಾಚಿಸಿದರು. ಲಕ್ಷ್ಮೀ ಮ್ಯಾಗೇರಿ ಸ್ವಾಗತಿಸಿದರು. ಮಂಜುಳಾ ಚವ್ಹಾಣ ನಿರೂಪಿಸಿದರು. ಮಾಯಾವತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net