ಶಿಕ್ಷಣದಿಂದ ಯಾರೂ ವಂಚಿತರಾಗದಿರಲಿ

SIRSI SAPRDE
Published on

ಶಿರಸಿ: ಬಡವರು ಅಥವಾ ಕೂಲಿಕಾರರ ಮಕ್ಕಳಾಗಿದ್ದರೂ ಸರಿ, ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಲ್ಲಿರುವ ಪ್ರತಿಭೆ, ಶಿಕ್ಷಣ ದಾಹವೇ ಆ ಕುಟುಂಬವನ್ನು ಆರ್ಥಿಕವಾಗಿ ಮೇಲೆತ್ತಬಲ್ಲದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದ ರಂಗಧಾಮದಲ್ಲಿ ಸೋಮವಾರ ಆಯೋಜಿಸಿರುವ ಪ್ರೌಢ ಶಾಲೆ ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಂಸ್ಕಾರಯುತ, ಯೋಗ್ಯ ಮಾರ್ಗದಲ್ಲಿ ಸಾಗಬೇಕೆಂದರೆ ಶಿಕ್ಷಣವೇ ತಳಪಾಯವಾಗುತ್ತದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ವಿಜ್ಞಾನವನ್ನು ಸುಲಭಗೊಳಿಸಲು ಮತ್ತು ವಿದ್ಯಾರ್ಥಿಗಳ ಮನಸಿನಲ್ಲಿ ವಿಜ್ಞಾನದ ವಿಷಯಗಳು ಗಟ್ಟಿಯಾಗಿ ನಿಲ್ಲಬೇಕು ಎಂಬ ಕಾರಣದಿಂದ ಸರ್ಕಾರ ವಿಜ್ಞಾನ ನಾಟಕ ಸ್ಪರ್ಧೆಯನ್ನು ರಾಜ್ಯ ಮಟ್ಟದಲ್ಲಿ ಏರ್ಪಡಿಸುತ್ತಿದೆ. ಮಕ್ಕಳಲ್ಲಿ ಧೈರ್ಯ ತುಂಬಿ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಯತ್ನ ನಮ್ಮಿಂದಾಗುತ್ತಿದೆ. ವಿದ್ಯಾರ್ಥಿಗಳು ಕಲೆಯಲ್ಲೂ ಪಳಗಿದಂತಾಗುತ್ತದೆ. ನಾಡಿಗೆ ಸಂದೇಶ ನೀಡುವ ನಾಟಕಗಳು ಜನತೆಗೆ ಹೆಚ್ಚೆಚ್ಚು ತಲುಪಬೇಕು ಎಂದರು.

ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ಪಿ. ಬಸವರಾಜ ಮಾತನಾಡಿ, ನಾಟಕ ಮಾಧ್ಯಮ ಅನಾದಿಕಾಲದ ಜಾನಪದ ಕಲೆ. ರಂಗ ಕಲೆ ಮೂಲಕ ಶಿಕ್ಷಣ ನೀಡುವ ಯತ್ನ ಬಹು ದಿನಗಳಿಂದ ನಡೆಯುತ್ತಿದೆ. ವಿಜ್ಞಾನ ಜನಸಾಮಾನ್ಯರಿಗೆ ಮುಟ್ಟಬೇಕು. ಯಕ್ಷಗಾನ, ನಾಟಕಗಳು ನಮ್ಮ ರಕ್ತಗತ ಕಲೆ ಆಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ರಂಗಕರ್ವಿು ಡಾ. ಶ್ರೀಪಾದ ಭಟ್, ನಾಗರಾಜ ನಾಯ್ಕ, ಅಜಯ ನಾಯ್ಕ, ನಾರಾಯಣ ದೈಮನಿ, ರಾಜಶೇಖರ, ಸುರೇಶ ಪಟಗಾರ, ಎಸ್.ಜಿ. ಹೆಗಡೆ, ಎಂ.ಎಸ್. ಹೆಗಡೆ, ಇತರರಿದ್ದರು.

ವೈಯಕ್ತಿಕ ಬಹುಮಾನ ನೀಡಿದ ಶಾಸಕ !: ನಾಟಕ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಸರ್ಕಾರದಿಂದ ನೀಡಲಾಗುವ ಬಹುಮಾನ ಕಡಿಮೆ ಇರುವ ಕಾರಣ ಶಾಸಕ ಭೀಮಣ್ಣ ನಾಯ್ಕ ಅವರೇ ಹೆಚ್ಚುವರಿಯಾಗಿ ಬಹುಮಾನ ನೀಡಿದರು. ಪ್ರಥಮ ಬಂದ ತಂಡಕ್ಕೆ 10 ಸಾವಿರ ರೂ., ದ್ವಿತೀಯ ತಂಡಕ್ಕೆ 5 ಸಾವಿರ ರೂ. ಸ್ಥಳದಲ್ಲಿಯೇ ನೀಡಿ, ವಿಜೇತ ತಂಡಗಳಿಗೆ ಸರ್ಕಾರದಿಂದ ನೀಡುವ ಬಹುಮಾನದ ಜೊತೆ ಈ ಬಹುಮಾನವನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net