

ಹೊನ್ನಾವರ: ಶಿಕ್ಷಣದಿಂದ ಮಾತ್ರ ಪರಿಪೂರ್ಣತೆ ಸಾಧಿಸಲು ಸಾಧ್ಯ. ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಶಿಕ್ಷಣ ಕ್ಷೇತ್ರದಲ್ಲಿ ಅತಿ ಅಗತ್ಯ ಇರುವ ಮೂಲಭೂತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಕೆಳಗಿನೂರಿನ ಒಕ್ಕಲಿಗರ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಣ ಇಲಾಖೆಯ ಮೂಲಭೂತ ಸೌಕರ್ಯ ಮತ್ತು ಕುಂದುಕೊರತೆಗಳ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವುದು ನನ್ನ ಆಸೆಯಾಗಿದೆ. ಶಿಕ್ಷಕ ವೃತ್ತಿ ತುಂಬಾ ಗೌರವಯುತವಾದ ಹುದ್ದೆ. ನಮ್ಮ ಕ್ಷೇತ್ರದಲ್ಲಿರುವ ಶಿಕ್ಷಕರು ಪ್ರಾಮಾಣಿಕರಾಗಿದ್ದಾರೆ ಎಂದರು.
ವಿವಿಧ ಶಾಲೆಗಳ ಮುಖ್ಯಾಧ್ಯಾಪಕರಿಂದ ಸಚಿವರು ಅಹವಾಲು ಸ್ವೀಕರಿಸಿದರು. ಶಾಲೆಗಳಲ್ಲಿ ಅತಿ ಅಗತ್ಯ ಇರುವ ಮೂಲಭೂತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ ಕೆಲಸವನ್ನು ಮಾಡಲಾಗುವುದು. ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸರ್ಕಾರದಲ್ಲಿ ಹಣ ಇದೆ. ಶಿಕ್ಷಣ ಇಲಾಖೆಗೆ ಹಣ ನೀಡಲು ಯಾವುದೇ ಕೊರತೆ ಇಲ್ಲ. ಹಣ ತರಲು ಸಾಧ್ಯವಿದೆ. ನೂರಾರು ಶಾಲೆಗಳ ಮುಖ್ಯಾಧ್ಯಾಪಕರು ಅಹವಾಲು ಸಲ್ಲಿಸಿದ್ದಾರೆ ಎಂದರು.
ತಾ.ಪಂ. ಇಒ ಸುರೇಶ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಉಪಸ್ಥಿತರಿದ್ದರು.
ಹೊನ್ನಾವರ ತಾಲೂಕಿನ ಶಿಕ್ಷಕರಿಗಾಗಿ ‘ಗುರುಭವನ’ ಮಂಜೂರಿ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಹೆಗಡೆ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ, ನೌಕರರ ಸಂಘದ ಅಧ್ಯಕ್ಷ ಆರ್.ಟಿ. ನಾಯ್ಕ, ಸಾಧನಾ ಬರ್ಗಿ, ಅಣ್ಣಪ್ಪ ಮುಕ್ರಿ ಹಾಗೂ ಸದಸ್ಯರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಮಂಕಾಳ ವೈದ್ಯ, ಶಿಕ್ಷಕರಿಗೆ ಗುರುಭವನದ ಅಗತ್ಯವಿದೆ. ನಿಮ್ಮ ಕಾರ್ಯಕ್ರಮಗಳನ್ನು ನಿಮ್ಮದೇ ಭವನದಲ್ಲಿ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಗುರುಭವನ ಮಂಜೂರಿಗೆ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.