ಅರಣ್ಯವಾಸಿಗಳಿಗೆ ಆಗದಿರಲಿ ಅನ್ಯಾಯ

25sirsi4
Published on

ಶಿರಸಿ: ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆಯಿಂದ ಅನ್ಯಾಯವಾಗಲಾರದು ಎಂದು ಅರಣ್ಯ ಇಲಾಖೆ ವಿವಿಧ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ನಗರದ ಅರಣ್ಯ ಇಲಾಖೆ ಆವರಣದಲ್ಲಿ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ ಅವರೊಂದಿಗೆ ಮಂಗಳವಾರ ನಡೆದ ಅಧಿಕಾರಿಗಳೊಂದಿಗೆ ಅದಾಲತ್​ನಲ್ಲಿ ಈ ಭರವಸೆ ನೀಡಿದರು. ಡಿಎಫ್​ಒ ಡಾ. ಅಜ್ಜಯ್ಯ ಜೆ.ಆರ್., ದಾಂಡೇಲಿಯ ಕಾಳಿ ಹುಲಿ ಸಂರಕ್ಷಣಾ ಯೋಜನೆ ಅಧಿಕಾರಿ ನಿಲೇಶ ಕುಮಾರ ಮತ್ತು ತನಿಖಾ ತಂಡದ ಉಪ ಸಂರಕ್ಷಣಾಧಿಕಾರಿ ಅಜೀಜ್ ಅವರ ಉಪಸ್ಥಿತಿಯಲ್ಲಿ ಈ ಸಭೆ ನಡೆಯಿತು.

ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವರಿಗೆ ಜಿಪಿಎಸ್ ಮಾನದಂಡದಡಿ ಸಾಗುವಳಿಗೆ ಆತಂಕ ಮಾಡುವುದಿಲ್ಲ. ಅರ್ಜಿ ಸಲ್ಲಿಸಿದವರ ಮೇಲೆ ವಿನಾಕಾರಣ ಭೂಕಬಳಿಕೆ ನಿಷೇಧ ಕಾಯ್ದೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದನ್ನು ನಿಯಂತ್ರಿಸಲಾಗುವುದು. ಒಕ್ಕಲೆಬ್ಬಿಸುವ ಪ್ರಕ್ರಿಯೆ ಮೂಲಕ ನೋಟಿಸ್ ನೀಡುವುದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಕಾಯ್ದೆಯಲ್ಲಿ ಅರ್ಜಿ ನೀಡಿ, ಜಿಪಿಎಸ್ ಆಗದೆ ಇರುವ ಅತಿಕ್ರಮಣದಾರರಿಗೆ ಸಾಗುವಳಿಗೆ ಆತಂಕ ಮಾಡದಂತೆ ನಿರ್ದೇಶನ ನೀಡುವುದು, ಅರಣ್ಯವಾಸಿಗಳಿಗೂ ಅರಣ್ಯ ಇಲಾಖೆ ಉಚಿತವಾಗಿ ಗಿಡ ವಿತರಣೆ ಮಾಡುವುದು ಮತ್ತು ಸಾರ್ವಜನಿಕ ರಸ್ತೆ ಪಕ್ಕ ಆತಂಕಕಾರಿ ಗಿಡ ತೆಗೆಯುವ ಬಗ್ಗೆ ಕ್ರಮ ಜರುಗಿಸುವಿಕೆ ಮುಂತಾದ ಗಂಭೀರ ಸಮಸ್ಯೆಗಳಿಗೆ ಅಧಿಕಾರಿಗಳು ಉತ್ತರಿಸಿದರು.

ಅದಾಲತ್​ನಲ್ಲಿ ಹೋರಾಟಗಾರರ ವೇದಿಕೆಯ ಪದಾಧಿಕಾರಿಗಳಾದ ಪ್ರಧಾನ ಸಂಚಾಲಕ ಜೆ.ಎಂ. ಶೆಟ್ಟಿ ಅಚವೆ, ವಿವಿಧ ತಾಲೂಕು ಅಧ್ಯಕ್ಷರಾದ ರಮಾನಂದ ನಾಯ್ಕ, ಭೀಮಶಿ ವಾಲ್ಮೀಕಿ, ಶಿವಾನಂದ ಜೋಗಿ, ಮಂಜುನಾಥ ಮರಾಠಿ, ಹರಿಹರ ನಾಯ್ಕ, ಓಂಕಾರ, ಬಾಲಚಂದ್ರ ಶೆಟ್ಟಿ, ಸಂತೋಷ ಗಾವಡಾ, ಜಗದೀಶ ಶೆಟ್ಟಿ ಮುಂಡಗೋಡ, ಮಂಜುನಾಥ ನಾಯ, ಮಹೇಶ ನಾಯ್ಕ ಸಾಲ್ಕೋಡ, ಟಿಪ್ಪು ನಾಯ್ಕ, ಇತರರು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಆಕ್ರೋಶ: ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ ಬಡ ಅತಿಕ್ರಮದಾರರಿಗೆ ಒಂದು ನೀತಿ, ಶ್ರೀಮಂತ ಅತಿಕ್ರಮಣದಾರರಿಗೆ ಇನ್ನೊಂದು ನೀತಿ ಅನುಸರಿಸಿ ತಾರತಮ್ಯ ಮಾಡುತ್ತಿದ್ದಾರಲ್ಲದೆ, ಕಾನೂನಿಗೆ ವ್ಯಕ್ತಿರಿಕ್ತವಾಗಿ ಅರಣ್ಯವಾಸಿಗಳ ವಿರುದ್ಧ ದೌರ್ಜನ್ಯ ಎಸಗುವ ಕುರಿತು ಜಿಲ್ಲಾದ್ಯಂತ ಆಗಮಿಸಿದ ಹೋರಾಟಗಾರರು ಅದಾಲತ್​ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವನ್ಯ ಪ್ರಾಣಿಗಳಾದ ಆನೆ, ಮಂಗ, ಕರಡಿ ಸಾಗುವಳಿ ಕ್ಷೇತ್ರಕ್ಕೆ ಆಗಮಿಸಿ ಬೆಳೆ ನಷ್ಟ ಮಾಡುತ್ತಿರುವುದಲ್ಲದೆ, ಅರಣ್ಯವಾಸಿಗಳ ಮೇಲೂ ದಾಳಿ ನಡೆಸುತ್ತಿವೆ. ಅರಣ್ಯ ಇಲಾಖೆ ನಿಯಂತ್ರಿಸಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕಾಡು ಪ್ರಾಣಿಗಳಿಂದಾದ ದಾಳಿ ಮತ್ತು ನಷ್ಟಕ್ಕೆ 2023-24 ರ ಸಾಲಿನಲ್ಲಿ 1525 ಕುಟುಂಬಗಳಿಗೆ 24,79,6026 ರೂ. ಪರಿಹಾರ ವಿತರಿಸಲಾಗಿದೆ. ಜಿಲ್ಲೆಯಲ್ಲಿ ವನ್ಯಪ್ರಾಣಿಗಳಿಂದ ಬೆಳೆ ನಷ್ಟ ಉಂಟಾಗಿರುವ 1094 ಕುಟುಂಬಗಳಿಗೆ 1,15,09096 ರೂ., 410 ದನಕರಗಳ ಸಾವಿಗೆ 78,89,400 ರೂ. ಪರಿಹಾರ ನೀಡಲಾಗಿದೆ. ಕಾಡು ಪ್ರಾಣಿ ದಾಳಿಯಿಂದ ಅಸು ನೀಗಿದ ಮೂವರ ಕುಟುಂಬಕ್ಕೆ 37.5 ಲಕ್ಷ ರೂ., ಅಂಗವೈಕ್ಯಲ್ಯವಾಗಿರುವ ಒಬ್ಬರಿಗೆ 2.5 ಲಕ್ಷ ರೂ., 15 ಜನರಿಗೆ ವನ್ಯ ಪ್ರಾಣಿಯಿಂದ ಗಾಯವಾಗಿರುವುದಕ್ಕೆ 9,35,530 ರೂ., ಇಬ್ಬರಿಗೆ ಮಾಶಾಸನಕ್ಕೆ 4.62ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಡಾ. ಅಜ್ಜಯ್ಯ ಜೆ. ಆರ್., ಡಿಎಫ್ ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net