

ಮೈಸೂರು: ಭ್ರೂಣಶಾಸ್ತ್ರ ಮತ್ತು ನೆರವಿನ ಸಂತಾನೋತ್ಪತ್ತಿಯಂತಹ ಹೊಸ ತಂತ್ರಜ್ಞಾನಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಕಸನಗೊಳ್ಳಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿಪ್ರಾಯಪಟ್ಟರು.
ಏಷ್ಯಾ ಫೆಸಿಪಿಕ್ ಭ್ರೂಣಶಾಸ್ತ್ರ ಸಂಸ್ಥೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಶನಿವಾರ ನಗರದಲ್ಲಿ ಆಯೋಜಿಸಿದ್ದ ಸಂತಾನೋತ್ಪತ್ತಿ ನೆರವಿಗಾಗಿ ನಾವೀನ್ಯತೆ ಮತ್ತು ಮುಂದುವರಿದ ತಂತ್ರಜ್ಞಾನ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಮಾನದಲ್ಲಿ ಗರ್ಭಧಾರಣೆಯ ಫಲವತ್ತತೆಯ ದರ ಕ್ಷೀಣಿಸುತ್ತಿರುವಂತಹ ಸೂಕ್ಷ್ಮ ಸಮಸ್ಯೆಯನ್ನು ಸಮಾಜ ಎದುರಿಸುತ್ತಿದೆ. ಈಗಂತೂ ಇದು ಸಾಮಾಜಿಕ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಭ್ರೂಣಶಾಸ್ತ್ರ ಮತ್ತು ನೆರವಿನ ಸಂತಾನೋತ್ಪತ್ತಿಯಂತಹ ಹೊಸ ತಂತ್ರಜ್ಞಾನಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಕಸನಗೊಳ್ಳಬೇಕಿದೆ ಎಂದು ಹೇಳಿದರು.
ಇದು ಕೇವಲ ವೈದ್ಯಕೀಯ ಪ್ರಗತಿಗಾಗಿ ಮಾತ್ರವಲ್ಲದೆ, ಸಮಾಜಗಳು ಎದುರಿಸುತ್ತಿರುವ ಸವಾಲನ್ನು ಪರಿಹಾರ ಮಾಡಲು ಅವಶ್ಯವಾಗಿ ಬೇಕಾಗಿದೆ. ಹಾಗಾಗಿ ಶತಮಾನೋತ್ಸವ ಕಂಡಿರುವ ಮೈಸೂರು ವಿಶ್ವವಿದ್ಯಾನಿಲಯ ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯ ಶಿಕ್ಷಣ ಬೆಳವಣಿಗೆಯನ್ನು ಬೆಂಬಲಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಎಎಸ್‌ಪಿಐಇಆರ್‌ನಲ್ಲಿ ಅನುಷ್ಠಾನಗೊಳಿಸಿರುವ ಎಂಎಸ್ಸಿ ಪದವಿಯು ದೇಶದ ಪ್ರಮುಖ ಸ್ನಾತಕೋತ್ತರ ಪದವಿಯಲ್ಲಿ ಒಂದು ಎಂಬ ಖ್ಯಾತಿ ಗಳಿಸಿರುವುದು ಸಣ್ಣ ಸಾಧನೆಯಲ್ಲ. ಈ ವಿಷಯ ಶೈಕ್ಷಣಿಕ ಜ್ಞಾನವನ್ನು ಮಾತ್ರವಲ್ಲದೆ ಫಲವತ್ತತೆ ಕ್ಲಿನಿಕ್‌ಗಳನ್ನು, ಐವಿಎಫ್ ಪ್ರಯೋಗಾಲಯಗಳು ಮತ್ತು ಇತರ ಸಂತಾನೋತ್ಪತ್ತಿ ಔಷಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಪ್ರಾಯೋಗಿಕ ಕೌಶಲಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ ಎಂದರು.
ಪದವಿ ಮುಗಿಸಿ ವಿಶ್ವವಿದ್ಯಾನಿಲಯದಿಂದ ಹೊರಬರುವ ಭ್ರೂಣ ಶಾಸ್ತ್ರಜ್ಞರು ಐವಿಎಫ್ ಚಿಕಿತ್ಸೆಗೆ ಮೂಲಾಧಾರವಾಗುತ್ತಾರೆ. ಅಲ್ಲದೆ ಬಂಜೆತನದಿಂದ ಬಳಲುತ್ತಿರುವ ದಂಪತಿಗಳಲ್ಲಿ ಸಂತಾನೋತ್ಪತಿ ಫಲವತ್ತತೆ ಉಂಟಾಗಲು ವೈದ್ಯಕೀಯ ಸಹಾಯ ಮಾಡುತ್ತಾರೆ. ಈ ಪಯಾಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪಾಲುದಾರರಾಗಿದ್ದು, ಹೊಸ ದೃಷ್ಟಿಕೋನ ಬೆಂಬಲಿಸುತ್ತಿದೆ ಎಂದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪುರಷರಷ್ಟೇ ಅಲ್ಲ ಮಹಿಳೆಯರು ಕೂಡಾ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸುವ ಕಾರಣದಿಂದ ಹಾಗೂ ಕೆಲಸಗಳ ಒತ್ತಡದಿಂದಾಗಿ ಮದುವೆಯಾದ ಎಷ್ಟೋ ವರ್ಷಗಳ ಬಳಿಕ ಮಕ್ಕಳು ಆಗಬೇಕು ಎನ್ನುವ ಧ್ಯೇಯ ಇಟ್ಟುಕೊಂಡಿರುತ್ತಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸಂತಾನೋತ್ಪತ್ತಿಗೆ ಅಗತ್ಯವಾಗಿರುವ ವಯಸ್ಸು ಮೀರಿ ಹೋಗುತ್ತದೆ. ಇದರ ಜತೆಗೆ ಒತ್ತಡದ ಜೀವನದಿಂದ ದೈಹಿಕ ಮತ್ತು ಮಾನಸಿಕ ಆಯಾಸ ಇರುತ್ತದೆ. ಇದರಿಂದಾಗಿ ಫಲವತ್ತತೆಯೂ ಕ್ಷೀಣಿಸುತ್ತದೆ ಎಂದರು.
ಹೀಗಾಗಿ ಭ್ರೂಣಶಾಸ್ತ್ರದಂತಹ ನೂತನ ವಿಷಯಗಳು ಇಂತಹ ವಿಷಯದ ಕಡೆ ಹೆಚ್ಚು ಗಮನಹರಿಸಿ, ಸಮಸ್ಯೆಗಳನ್ನು ಪರಿಹಾರ ಮಾಡಲು ಸಮಾಜಮುಖಿ ಸಂಶೋಧನೆಗಳನ್ನು ಕೈಗೊಳ್ಳಬೇಕು. ಹೊಸ ತಂತ್ರಜ್ಞಾನಗಳಿಂದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ನಾಗರಾಜು, ಭ್ರೂಣಶಾಸ್ತ್ರಜ್ಞ ಡಾ.ಗೋಪಾಲ್, ಎಎಸ್‌ಪಿಐಇಆರ್ ಮುಖ್ಯಸ್ಥ ಡಾ.ಸುರೇಶ್ ಕಟ್ಟೇರ ಇತರರು ಇದ್ದರು.