

ಮೈಸೂರು: ಮೈಸೂರನ್ನು ಯೋಗ ನಗರಿ ಎಂದು ಅಧಿಕೃತವಾಗಿ ಘೋಷಿಸಿ, ಯೋಗ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಚೈತನ್ಯ ಯೋಗ ಎಜುಕೇಷನಲ್ ಆ್ಯಂಡ್ ರಿಸರ್ಚ್ ಫೌಂಡೇಷನ್‌ನ ಯೋಗ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಸಾಂಸ್ಕೃತಿಕ ನಗರಿ ಮೈಸೂರಿಗೆ ಯೋಗ ಕಲಿಯಲು ದೇಶ-ವಿದೇಶಗಳ ಸಾವಿರಾರು ಜನ ಬರುತ್ತಿದ್ದಾರೆ. ಯಾದವಗಿರಿ, ಒಂಟಿಕೊಪ್ಪಲು, ಗೋಕುಲಂನಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ನೂರಾರು ವಿದೇಶಿಯರು ಕಣ್ಣಿಗೆ ಬೀಳುತ್ತಾರೆ. ಹೀಗಾಗಿ ಮೈಸೂರನ್ನು ಯೋಗ ನಗರಿ ಎಂದು ಕರೆಯಲಾಗುತ್ತಿದೆ. ಆದರೆ ಅಧಿಕೃತವಾಗಿ ಘೋಷಿಸಿ, ಯೋಗ ಅಭಿವೃದ್ಧಿಗೆ ಅನುದಾನ ನೀಡಿದರೆ ಮತ್ತಷ್ಟು ಉತ್ತಮ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರೋತ್ಸಾಹದಿಂದ ಕೃಷ್ಣಮಾಚಾರ್ ಮೈಸೂರಿನಲ್ಲಿ ಯೋಗ ಆರಂಭಿಸಿದರು. ಬಿಕೆಎಸ್ ಅಯ್ಯಂಗಾರ್ ಅವರು ಅದನ್ನು ವಿಶ್ವಮಟ್ಟದಲ್ಲಿ ಪ್ರಚುರಪಡಿಸಲು ಕಾರಣಕರ್ತರಾದರು ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೆಸೂರು ಯೋಗ ಒಕ್ಕೂಟದ ಅಧ್ಯಕ್ಷ ಟಿ.ಜಲೇಂದ್ರಕುಮಾರ್ ಮಾತನಾಡಿ, ಮೂವತ್ತು ವರ್ಷಗಳ ಹಿಂದೆ ನಗರದಲ್ಲಿ ಕೇವಲ ಐದು ಯೋಗ ಕಲಿಕೆ ಸಂಸ್ಥೆಗಳಿದ್ದವು. ಈಗ ಸಾಕಷ್ಟು ಬೆಳೆದಿದೆ. ಇದರಿಂದಾಗಿಯೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಿದ್ದರು ಎಂದರು.
ಜಿಎಸ್‌ಎಸ್ ಯೋಗ ಫೌಂಡೇಷನ್ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್ ಮಾತನಾಡಿ, ಯೋಗ ಎಂದರೆ ಕೇವಲ ಅಭ್ಯಾಸವಲ್ಲ. ಜೀವನದ ಪ್ರತಿಯೊಂದು ಹೆಜ್ಜೆ ಕೂಡ ಯೋಗವೇ. ಮೈಸೂರಿನ ಎಲ್ಲ ಯೋಗ ಸಂಘಟನೆಗಳ ಸಹಕಾರದಿಂದ ಯೋಗವನ್ನು ಪ್ರಸಿದ್ಧಿ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಫೌಂಡೇಷನ್ ಅಧ್ಯಕ್ಷ ಬಿ.ಪಿ.ಮೂರ್ತಿ ಪ್ರಾಸ್ತಾವಿಕ ಮಾತನಾಡಿ, 23 ವರ್ಷಗಳ ಹಿಂದೆ ಆರಂಭವಾದ ನಮ್ಮ ಸಂಸ್ಥೆ ಈವರೆಗೆ ಸಾವಿರಾರು ಮಂದಿಗೆ ಯೋಗ ತರಬೇತಿ ನೀಡಿದೆ ಎಂದರು.
ಆರೋಗ್ಯವೇ ಭಾಗ್ಯ, ಉತ್ತಮ ಆರೋಗ್ಯಕ್ಕೆ ಯೋಗ ಬೇಕು ಎಂಬ ಕಾರಣಕ್ಕಾಗಿ ಯೋಗಾಭ್ಯಾಸದ ಚಿತ್ರಗಳಿರುವ ಕ್ಯಾಲೆಂಡರ್ ಹೊರ ತರಲಾಗಿದೆ. ಸರಿಯಾದ ಆಹಾರ ಪದ್ಧತಿ, ವ್ಯಾಯಾಮ, ಉಸಿರಾಟ, ವಿಶ್ರಾಂತಿ, ಸಕಾರಾತ್ಮಕ ಚಿಂತನೆಗಳು ಮತ್ತು ಉತ್ತಮ ಜೀವನಶೈಲಿ ಈ ಪಂಚಸೂತ್ರಗಳನ್ನು ಅನುಸರಿಸಬೇಕು ಎಂದರು. ಇದೇ ವೇಳೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ಪತ್ರಿಕಾ ಚೈತನ್ಯ, ಜಿಎಸ್‌ಎಸ್ ಯೋಗ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್ ಅವರಿಗೆ ಯೋಗ ಚೈತನ್ಯ ಹಾಗೂ ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್.ಅನಂತ ಅವರಿಗೆ ಯೋಗ ಸಾಹಿತ್ಯ ಚೈತನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ತಜ್ಞೆ ನಂದಿನಿಮೂರ್ತಿ, ಫೌಂಡೇಷನ್‌ನ ಕಾರ್ಯದರ್ಶಿ ಭವಾನಿಲಕ್ಷ್ಮೀ, ಲಕ್ಷ್ಮೀನಾಗ್ ಇತರರು ಇದ್ದರು.