ಸಂಸದ ಪ್ರತಾಪ್ ಸಿಂಹ ಭದ್ರತಾ ಲೋಪದ ಹೊಣೆ ಹೊರಲಿ

Yatindra Siddaramaiah (FILEminimizer)
Published on

ಮೈಸೂರು; ಸಂಸತ್‌ನಲ್ಲಿ ನಡೆದ ಭದ್ರತಾ ಲೋಪದ ಹೊಣೆಯನ್ನು ಸಂಸದ ಪ್ರತಾಪ್ ಸಿಂಹ ಹೊರಬೇಕು ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್‌ಗೆ ನುಗ್ಗಿದ ಇಬ್ಬರು ಯುವಕರು ಪ್ರತಾಪ್ ಸಿಂಹ ಅವರ ಪರಿಚಯಸ್ಥರು. ಯುವಕರ ಉದ್ದೇಶ ಏನಿತ್ತು? ಇದರ ಹಿಂದೆ ಏನಾದರೂ ಹುನ್ನಾರ ಇದೆಯೇ ಎಂಬ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಬೇಕು. ಇದು ಸಾಮಾನ್ಯ ವಿಷಯವಲ್ಲ ಎಂದು ಹೇಳಿದರು.


ಬೇರೆ ಪಕ್ಷದವರು ಈ ತಪ್ಪು ಮಾಡಿದ್ದರೆ ಇಷ್ಟರಲ್ಲಿ ಭಯೋತ್ಪಾದಕ ಪಟ್ಟ ಕಟ್ಟುತ್ತಿದ್ದರು. ಪ್ರತಾಪ್ ಸಿಂಹ ಬಿಜೆಪಿ ಸಂಸದ ಎಂಬ ಕಾರಣಕ್ಕೆ ಕ್ರಮ ತೆಗೆದುಕೊಳ್ಳದೆ ರಕ್ಷಿಸಲಾಗುತ್ತಿದೆ. ಈ ಪ್ರಕರಣದ ಸಂಬಂಧ ತನಿಖೆ ಮಾಡಬೇಕು. ಅಲ್ಲಿಯವರೆಗೂ ಅವರನ್ನು ಸಂಸತ್ತಿನಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು


ಸಂಸತ್‌ನಲ್ಲಿ ಭಾರಿ ಬಿಗಿ ಭದ್ರತೆ ಇರುತ್ತದೆ. ಆದರೆ, ಭದ್ರತಾ ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಸಣ್ಣಪುಟ್ಟ ಕಾರಣಗಳಿಗೆ ಸಂಸದರನ್ನು ಅಮಾನತು ಮಾಡುವ ಕೇಂದ್ರದ ಎನ್‌ಡಿಎ ಸರ್ಕಾರ, ಇಷ್ಟು ಗಂಭೀರವಾದ ತಪ್ಪು ಮಾಡಿದ್ದರೂ ಏಕೆ ರಕ್ಷಿಸುತ್ತಿದೆ ಎಂದು ಪ್ರಶ್ನಿಸಿದರು.


ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದ ಗಡಿ ಸುಭದ್ರವಾಗಿದೆ ಎಂಬುದೆಲ್ಲ ಸುಳ್ಳು. ಹಾಗೆಂದು ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ. ಚೀನಾದವರು ದೇಶದ ಸ್ಥಳವನ್ನು ಆಕ್ರಮಿಸಿಕೊಂಡರೂ ಮೋದಿ ಏನೂ ಕ್ರಮ ತೆಗೆದುಕೊಳ್ಳಲಿಲ್ಲ. ದೇಶ ಸುರಕ್ಷಿತವಾಗಿದೆ ಎಂಬುದಾಗಿ ಸುಳ್ಳು ಹೇಳುತ್ತಾರೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net