

ದೇವದುರ್ಗ: ಸೈನ್ಯಕ್ಕೆ ಸೇರಬೇಕು ಎನ್ನುವ ಗುರಿ ಪ್ರತಿಯುವಕರಿಗೂ ಇರುತ್ತದೆ. ಕೇಂದ್ರ ಸರ್ಕಾರದ ಅಗ್ನಿವೀರ ಯೋಜನೆಯಡಿ ಆಯ್ಕೆಯಾಗಿ ದೇಶ ಸೇವೆಗೆ ದುಡಿಯುವ ಅಗ್ನಿವೀರರಿಗೆ ಸರ್ಕಾರ ಜೀವನ ಭದ್ರತೆ ಒದಗಿಸಬೇಕು ಎಂದು ನಿವೃತ್ತ ಸೈನಿಕ ಕರ್ನಲ್ ವೆಂಕಟೇಶ ನಾಯಕ ಹೇಳಿದರು.
ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ಸೈನಿಕ ತರಬೇತಿ ಅಕಾಡೆಮಿ, ದೇವದುರ್ಗ ನಾಗರಿಕ ವೇದಿಕೆಯಿಂದ ಆಯೋಜಿಸಿದ್ದ ಅಗ್ನಿವೀರ ಸೈನಿಕರಿಗೆ ಅಭಿನಂದನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ಯುವಸೈನ್ಯ ಕಟ್ಟುವ ದೃಷ್ಟಿಯಿಂದ ಅಗ್ನಿವೀರ ಯೋಜನೆ ಜಾರಿಗೆ ತಂದಿದ್ದು ಉತ್ತಮ ಉದ್ದೇಶವಿದ್ದರೂ ಯೋಜನೆಯಡಿ ಆಯ್ಕೆಯಾಗುವ ಯುವಕರಿಗೆ ನೌಕರಿ ಅಭದ್ರತೆ ಕಾಡುತ್ತಿದೆ. ಯೋಜನೆ ಪ್ರಕಾರ 17ವರ್ಷದ ಯುವಕರನ್ನು ನಾಲ್ಕುವರ್ಷ ಸೇನಾ ತರಬೇತಿ ಮಾದರಿಯಲ್ಲಿ ತೆಗೆದುಕೊಂಡು ಅದರಲ್ಲಿ ಶೇ.25 ಯುವಕರನ್ನು ಮಾತ್ರ ಸೇನೆಗೆ ಸೇರಿಸುತ್ತದೆ.
ನಾಲ್ಕು ವರ್ಷದ ನಂತರ ಅವರು ನಿರುದ್ಯೋಗಿಗಳು ಆಗುವ ಆತಂಕವಿದೆ. ಅಗ್ನಿವೀರ ಯೋಜನೆ ಬಗ್ಗೆ ಯುವಕರಿಗೆ ಅಸಮಾಧಾನವಿದೆ. ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದಾರೆ. 1962ರಲ್ಲಿ ಚೀನದೊಂದಿಗೆ ಭಾರತ ಸೋತಿದ್ದು ಹೋರಾಟ ಮನೋಭಾವದಿಂದ ಅಲ್ಲ. ಸರಿಯಾದ ವ್ಯವಸ್ಥೆ ಇಲ್ಲದೆ ಸೈನಿಕರು ಹೋರಾಟ ಮಾಡದ ಸ್ಥಿತಿಯಿಂದ ಸೋಲಾಯಿತು. ದೇಶಕ್ಕೆ ಸೇವೆಮಾಡಿ ಪ್ರಾಣ ಅರ್ಪಿಸಿದ ಯೋಧರ ಕುಟುಂಬವನ್ನು ಸರ್ಕಾರವೇ ನೋಡಿಕೊಳ್ಳುವ ಯೋಜನೆ ರೂಪಿಸಬೇಕಿದೆ. ಯುವಕರು ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದರು.
ದೇವದುರ್ಗ ಸೈನಿಕ ತರಬೇತಿ ಅಕಾಡೆಮಿ ಸಂಚಾಲಕ, ಮಾಜಿ ಸೈನಿಕ ಪಂಪಣ್ಣ ಅಕ್ಕರಕಿ ಮಾತನಾಡಿ, ದೇಶದ ರಕ್ಷಣೆ ಕೇವಲ ಸೈನಿಕರದು ಮಾತ್ರವಲ್ಲ. ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯೂ ಆಗಿದೆ. ಇಸ್ರೇಲ್ ಪುಟ್ಟದೇಶವಾಗಿದ್ದು ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಕಾರಣ ಅಲ್ಲಿನ ಪ್ರತಿಯೊಬ್ಬ ಪ್ರಜೆಯೂ ಸೈನಿಕನಾಗಿದ್ದಾನೆ ಎಂದರು.
ಅಗ್ನಿವೀರರಾಗಿ ಆಯ್ಕೆಯಾದ ಏಳು ಸೈನಿಕರನ್ನು ಡಾ.ಅಂಬೇಡ್ಕರ್ ವೃತ್ತದಿಂದ ಫಂಕ್ಷನ್‌ಹಾಲ್‌ವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.