

ಹನೂರು: ಪ್ರತಿಯೊಬ್ಬರೂ ಗಿಡ ಮತ್ತು ಮರಗಳನ್ನು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಉತ್ತಮ ಪರಿಸರ ನಿರ್ಮಿಸಲು ಸಾಧ್ಯ ಎಂದು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಎಸಿಎಫ್ ಚಂದ್ರಶೇಖರ್ ಪಾಟೀಲ್ ತಿಳಿಸಿದರು.
ತಾಲೂಕಿನ ಬಸಪ್ಪನದೊಡ್ಡಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಸಸಿನೆಟ್ಟು ಮಾತನಾಡಿದರು.
ಈ ಹಿಂದೆ ಹಿರಿಯರು ಗಿಡ-ಮರಗಳನ್ನು ಪೋಷಿಸುತ್ತಿದ್ದರು. ಇದರಿಂದ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಿತ್ತು. ಹಾಗೆಯೇ ಉತ್ತಮ ಆಮ್ಲಜನಿಕವೂ ಸಿಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರದ ನಾಶದಿಂದಾಗಿ ವಾತವರಣದಲ್ಲಿ ಏರುಪೇರುಗಳಾಗುತ್ತಿವೆ. ಇದರಿಂದ ಮನುಷ್ಯ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನೆ. ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ವಿದ್ಯಾರ್ಥಿ ದಿಸೆಯಲ್ಲೆ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ಹೊಂದಬೇಕು. ಗಿಡಗಳನ್ನು ನೆಟ್ಟು ಪೋಷಿಸಬೇಕು. ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್‌ಎಫ್‌ಒ ಪ್ರವೀಣ್, ಗ್ರಾಪಂ ಅಧ್ಯಕ್ಷ ಮುತ್ತುರಾಜು, ಮುಖ್ಯ ಶಿಕ್ಷಕ ವೀರಪ್ಪ, ಶಿಕ್ಷಕರು ಇತರರು ಇದ್ದರು.