ಆಧುನಿಕ ಕೃಷಿ ತಂತ್ರಜ್ಞಾನ ರೈತರಿಗೆ ತಲುಪಲಿ

SAC meeting-17.10.2022-1
ವಿಜಯಪುರ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಜರುಗಿದ 24ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಬಸವರಾಜಪ್ಪ ಉದ್ಘಾಟಿಸಿದರು. ಡಾ.ಪಿ.ಎಸ್.ಹೂಗಾರ, ಪಿ.ಮಲ್ಲೇಶಿ, ಡಾ.ಡಿ.ವಿ.ಕೋಳೇಕರ, ಡಾ. ಶ್ರೀಪಾದ ಕುಲಕರ್ಣಿ, ಡಾ.ಆರ್.ಬಿ.ಬೆಳ್ಳಿ ಮತ್ತಿತರರಿದ್ದರು.
Published on

ವಿಜಯಪುರ : ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗಾಗಿ ಹೆಚ್ಚು ಶ್ರಮಿಸಬೇಕು. ಆಧುನಿಕ ಕೃಷಿ ತಂತ್ರಜ್ಞಾನಗಳು ರೈತರ ಪಾಲಿಗೆ ವರವಾಗುವಂತೆ, ರೈತರ ಕೌಶಲ ಹೆಚ್ಚಿಸಿ, ಆದಾಯ ದ್ವಿಗುಣಗೊಳಿಸಲು ವಿಶ್ವವಿದ್ಯಾಲಯದ ಎಲ್ಲ ವಿಜ್ಞಾನಿಗಳು ಹೆಚ್ಚು ಕಾರ್ಯತತ್ಪರರಾಗಿರುವುದು ಅವಶ್ಯಕವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಬಸವರಾಜಪ್ಪ ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಜರುಗಿದ 24ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಪಿ.ಎಸ್.ಹೂಗಾರ ಮಾತನಾಡಿ, ಎಲ್ಲ ಬೆಳೆಗಳಲ್ಲಿರುವ ಹೊಸ ತಳಿಗಳ ಮಾಹಿತಿ, ಕೃಷಿಯಲ್ಲಿ ಹೆಚ್ಚು ಅತ್ಯಾಧುನಿಕ ಕೃಷಿಯಂತ್ರಗಳ ಬಳಕೆ, ಜೇನು ಸಾಕಾಣಿಕೆ, ದಾಳಿಂಬೆಯಲ್ಲಿ ದುಂಡಾಣು ರೋಗ ನಿರ್ವಹಣೆ, ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳು, ಉರಿ ಮಲ್ಲಿಗೆ ಸಮಸ್ಯೆ ನಿರ್ವಹಣೆ ಇತ್ಯಾದಿ ಮಾಹಿತಿ ನೀಡಿದರು.

ರೈತರಿಗೆ ಉಪಯುಕ್ತವಾದ ಕೃಷಿ ತಂತ್ರಜ್ಞಾನಗಳನ್ನು , ಕ್ಷೇತ್ರ ಪ್ರಾತ್ಯಕ್ಷಿಕೆ, ಕ್ಷೇತ್ರೋತ್ಸವ, ಹಸ್ತ ಪತ್ರಿಕೆ ಹಾಗೂ ಎಲ್ಲ ಮಾಧ್ಯಮಗಳ ಮೂಲಕ ರೈತರಿಗೆ ತಲುಪಿಸಿ ಅವರ ಆದಾಯ ದ್ವಿಗುಣಗೊಳಿಸಬೇಕಾಗಿದೆ. ಅದು ನಮ್ಮೆಲ್ಲ ವಿಜ್ಞಾನಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಸಾಗಬೇಕೆಂದರು.

ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಪಿ.ಮಲ್ಲೇಶಿ ಮಾತನಾಡಿ, ರೈತರಿಗಾಗಿ ನಾವೆಲ್ಲರೂ ಹೆಚ್ಚು ಹೆಚ್ಚು ಶ್ರಮಿಸಬೇಕಾಗಿದೆ ಎಂದರು.

ನೋಡಲ್ ಅಧಿಕಾರಿ ಡಾ.ಡಿ.ವಿ.ಕೋಳೇಕರ, ಡಾ. ಶ್ರೀಪಾದ ಕುಲಕರ್ಣಿ, ಡಾ.ಆರ್.ಬಿ.ಬೆಳ್ಳಿ, ಡಾ.ಅಶೋಕ ಸಜ್ಜನ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ರೂಪಾ ಎಲ್., ಡಾ. ಶುಭಾ ಎಸ್., ನಬಾರ್ಡ್ ವ್ಯವಸ್ಥಾಪಕ ಡಾ.ವಿಕಾಸ ರಾಠೋಡ, ಭಾರತೀಯ ಸಿರಿಧಾನ್ಯ ಸಂಸ್ಥೆಯ ವಿಜ್ಞಾನಿ ಡಾ. ಸಂಗಪ್ಪ, ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಅಶೋಕ ಘೋಣಸಗಿ, ಪ್ರಗತಿಪರ ರೈತರಾದ ಸಿದ್ದಪ್ಪ ಬೂಸಗೊಂಡ, ಪವನಕುಮಾರ ರಾಣಗಟ್ಟಿ, ಇಂದ್ರಜಿತ್ ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net