ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ

17 SRS- USHA HEGDE
Published on

ಶಿರಸಿ: ಬಿಜೆಪಿಯಿಂದ ಆಯ್ಕೆಯಾದರೂ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯೊಂದಿಗಿನ ಎಲ್ಲ ಸಂಪರ್ಕ ಕಳೆದುಕೊಂಡಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಅವರು ಚುನಾವಣೆ ಎದುರಿಸಲಿ ಎಂದು ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷೆ ಉಷಾ ಹೆಗಡೆ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಪರ ಪ್ರಚಾರ ನಡೆಸಿಲ್ಲ. 2019ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಅವರು ಕೇವಲ 1300 ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಆದರೆ, ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 31 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಲ್ಲಿ ಎಲ್ಲ ಸೌಲಭ್ಯ ಪಡೆದು, ಹುದ್ದೆ ಅನುಭವಿಸಿರುವ ಅವರು, ತಮ್ಮ ಪುತ್ರ ವಿವೇಕ ಹೆಬ್ಬಾರ್ ಅವರನ್ನೂ ಕಾಂಗ್ರೆಸ್​ಗೆ ಕಳಿಸಿದ್ದಾರೆ. ಈಗ ಕಾಂಗ್ರೆಸ್ ಮನೋಸ್ಥಿತಿಯಲ್ಲಿರುವ ಅವರು ತಮ್ಮ ಮತದಾರರಿಗೆ ನ್ಯಾಯ ಒದಗಿಸಬೇಕಿರುವುದರಿಂದ ಮತ್ತೆ ಚುನಾವಣೆ ಎದುರಿಸುವುದೇ ಸೂಕ್ತ. ಬಿಜೆಪಿಯಿಂದ ಅವರನ್ನು ಉಚ್ಛಾಟಿಸಿದರೂ ಶಾಸಕತ್ವ ಸ್ಥಾನ ಹಾಗೇ ಉಳಿಯುತ್ತದೆ. ಇದರ ಬದಲು ಅವರು ಇನ್ನೊಮ್ಮೆ ಚುನಾವಣೆ ಎದುರಿಸುವುದೇ ಸೂಕ್ತ ಎಂದರು.

ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಮಾತನಾಡಿ, ಶಿವರಾಮ ಹೆಬ್ಬಾರ್ ಅವರು ತಂದ ಕೆರೆ ತುಂಬುವ ಯೋಜನೆ ಇನ್ನೂ ಚಾಲನೆಗೊಂಡಿಲ್ಲ. ಈ ಯೋಜನೆಯನ್ನು ರೈತರು ವಿರೋಧಿಸುತ್ತಿದ್ದಾರೆ ಎಂದು ಆಪಾದಿಸಿದರು. ಪ್ರಸಾದ ಹೆಗಡೆ ಮಾತನಾಡಿದರು. ಪ್ರಮುಖರಾದ ಗಣೇಶ ಸಣ್ಣಲಿಂಗಣ್ಣನವರ್, ಪ್ರೇಮಕುಮಾರ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net