ದೀಪಕ ಚಿಂಚೋರೆ ತಿರುಗೇಟು; ಶಾಸಕ ಬೆಲ್ಲದ ತಮ್ಮ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಿ

15 Dwd 7 (Deepak Chinchore)
Published on

ಧಾರವಾಡ: ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅಹೋರಾತ್ರಿ ಹೋರಾಟ ಮಾಡುತ್ತಿರುವ ಶಾಸಕ ಅರವಿಂದ ಬೆಲ್ಲದ ಅವರು ಮೊದಲು ತಮ್ಮ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಿ ಎಂದು ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ ಹೇಳಿದರು.


ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮು ಸೌಹಾರ್ದತೆ ಕದಡುವ ನಿಟ್ಟಿನಲ್ಲಿ ವಿವಾದ ಸೃಷ್ಟಿಸುತ್ತಿರುವ ಅವರಿಗೆ ಕಾನೂನಿನ ಅರಿವಿಲ್ಲ. ಈ ಹಿಂದೆ ಆಶ್ರಯ ಮನೆ ವಿತರಣೆಯಲ್ಲಿ ತಾರತಮ್ಯ ಆದಾಗ ಪಾಲಿಕೆ ಕಚೇರಿಗೆ ಘೇರಾವ್ ಹಾಕಲು ಹೋಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಆದ್ದರಿಂದ ಪಾಲಿಕೆ ಕಚೇರಿಗೆ ನುಗ್ಗಿ ಪ್ರತಿಭಟನೆ ಮಾಡಿದವರು ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಬೆಲ್ಲದ ಈ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆರ್‌ಎಸ್‌ಎಸ್ ನಾಯಕರನ್ನು ಮೆಚ್ಚಿಸುವ ಕೆಲಸ ಮಾಡಿದ್ದರು. ಈಗ ಪ್ರತಿಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟು ಈದ್ಗಾ ಮೈದಾನದ ಗಲಾಟೆ ಸೃಷ್ಟಿಗೆ ತಡವಡಿಸುತ್ತಿದ್ದಾರೆ. ಜನರ ಆಚರಣೆಗೆ ಧಕ್ಕೆ ತರುವ ಕೆಲಸವನ್ನು ಶಾಸಕರು ಮಾಡಬಾರದು ಎಂದರು.
ಗಣೇಶೋತ್ಸವ ಹಬ್ಬ ಬರುತ್ತಿದ್ದಂತೆ ಅವರಲ್ಲಿ ಹಿಂದುತ್ವ ಉಕ್ಕಿ ಹರಿಯುತ್ತಿದೆ. ಮರಾಠಾ ಕಾಲನಿಯಲ್ಲಿ ಅವರ ಮನೆ ಇದ್ದರೂ ಒಮ್ಮೆಯೂ ಗಣೇಶೋತ್ಸವ ಮಂಡಳಿಗಳಿಗೆ ಚಂದಾ ಕೊಟ್ಟಿಲ್ಲ. ಜನರ ಭಾವನೆಗಳೊಂದಿಗೆ ಆಟ ಆಡುವುದನ್ನು ಬಿಡದಿದ್ದರೆ ಅವರ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಕಿತ್ತೂರ, ವೆಂಕಟೇಶ ಸಗಬಾಲ, ಪ್ರಕಾಶ ಹಳ್ಯಾಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net